ಝಾನ್ಸಿ(ಉತ್ತರಪ್ರದೇಶ): ನವ ಜೀವನಕ್ಕೆ ಕಾಲಿಟ್ಟ ಜೋಡಿಗಳು ಬಹುತೇಕ ಕನಸಿನಲ್ಲಿ ತೇಲುತ್ತಿರುತ್ತವೆ. ಸುಂದರ ಕನಸುಗಳನ್ನು ಕಟ್ಟಿಕೊಂಡು ನನಸು ಮಾಡಿಕೊಳ್ಳುವ ಉತ್ಸಾಹದಲ್ಲಿರುತ್ತಾರೆ. ಆದರೆ ಇಲ್ಲೊಂದು ಜೋಡಿ ಸಪ್ತಪದಿ ತುಳಿದು ಮರುಗಳಿಗೆಯಲ್ಲಿ ಈಡೇರದ ಷರತ್ತುಗಳಿಗಾಗಿ ಮುರಿದು ಬಿದ್ದಿದೆ.
ವಧು ವಿಧಿಸಿದ ಮೂರು ವಿಲಕ್ಷಣ ಷರತ್ತುಗಳನ್ನು ಸ್ವೀಕರಿಸಲು ವರ ನಿರಾಕರಣೆ ಮಾಡುವ ಮೂಲಕ ಮದುವೆ ಮುರಿದು ಬಿದ್ದಿದೆ. 'ವಿದಾಯಿ' (ವಿದಾಯದ) ಸಮಾರಂಭದಲ್ಲಿ, ವಧುವಿನ ಮಲತಂದೆ ವರನ ಮುಂದೆ ಮೂರು ಷರತ್ತುಗಳನ್ನು ಹಾಕಿದ್ದಾರೆ. ಆದರೆ ವರ ಆ ಪ್ರಸ್ತಾವನೆಗಳನ್ನು ಸ್ವೀಕರಿಸಲು ಸುತಾರಾಂ ಒಪ್ಪಿಲ್ಲ. ಇದು ವಿವಾಹ ಸಂಬಂಧಗಳು ಮುರಿದು ಬೀಳುವಂತೆ ಮಾಡಿದೆ.
ಇನ್ನು ವಧು ವರನ ಮನೆಗೆ ಹೋಗಲು ಒಪ್ಪಿಲ್ಲ. ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲು ಕೂಡಾ ಹತ್ತಿದೆ. ವಧುವಿನ ಕಡೆಯವರ ಷರತ್ತುಗಳ ಬಗ್ಗೆ ತಕಾರರು ತೆಗೆದ ವರನ ಕಡೆಯವರು, ನ್ಯಾಯ ಕೋರಿ ಪೊಲೀಸ್ ಠಾಣೆ ಮೊರೆ ಹೋಗಿದ್ದರು. ಈ ಸಂಬಂಧ ವರ ಹಾಗೂ ಆತನ ಸಂಬಂಧ ಪೊಲೀಸ್ ಠಾಣೆಯಲ್ಲೇ ದಿನ ದೂಡಿದ ಪ್ರಸಂಗವೂ ಝಾನ್ಸಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಬರುಸಾಗರ್‌ನಲ್ಲಿ ಮದುವೆ ಸಮಾರಂಭ ನಡೆದಿತ್ತು. ಯುವಕ ಮನ್ವೇಂದ್ರನ ವಿವಾಹವು ಸಮೀಪದ ಹಳ್ಳಿಯ ಹುಡುಗಿ ಜ್ಯೋತಿಯೊಂದಿಗೆ ನಿಶ್ಚಯವಾಗಿತ್ತು. ಜೂನ್ 6ರಂದು ಮದುವೆ ಸಮಾರಂಭ ಅದ್ಧೂರಿಯಾಗಿಯೇ ನಡೆದಿತ್ತು. ಎಲ್ಲವೂ ಅಂದುಕೊಂಡಂತೆ ಯಶಸ್ವಿಯಾಗಿಯೇ ಮಾಡಿ ಮುಗಿಸಲಾಗಿತ್ತು. ಈ ಮದುವೆಯಿಂದ ವರನ ಮನೆಯವರು ಸಂತಸಗೊಂಡಿದ್ದರು. ಬಾರಾತಿಗಳ ಸದಸ್ಯರು ಮತ್ತು ವಧುವಿನ ಕುಟುಂಬದವರು ಮದುವೆಯ ಕ್ಷಣ ಕ್ಷಣಗಳನ್ನು ಆನಂದಿಸುತ್ತಿದ್ದರು. ರಾತ್ರಿಯಿಡೀ ಮದುವೆ ವಿಧಿವಿಧಾನಗಳು ಸಾಂಗವಾಗಿಯೇ ನೆರವೇರಿದ್ದವು.
ಶುಭ ವಿವಾಹದ ಬಳಿಕ ಔತಣಕೂಟ ಏರ್ಪಡಿಸಲಾಗಿತ್ತು. ಜೂನ್ 7 ರಂದು ನವ ದಂಪತಿಗಳಿಗೆ ಬೀಳ್ಕೊಡುಗೆ ನೀಡಲು ಸಕಲ ಸಿದ್ಧತೆಗಳೂ ಪೂರ್ಣಗೊಂಡಿದ್ದವು. ಇದ್ದಕ್ಕಿದ್ದಂತೆ, ವಧುವಿನ ತಂದೆ ವರನ ಮುಂದೆ ಮೂರು ಷರತ್ತುಗಳನ್ನು ಹಾಕಿದರು. ಮೊದಲ ಷರತ್ತು ವಧು ಮತ್ತು ವರರು ಎಂದಿಗೂ ದೈಹಿಕ ಸಂಬಂಧವನ್ನು ಹೊಂದುವಂತಿಲ್ಲ. ಎರಡನೆಯ ಷರತ್ತು ಎಂದರೆ ವಧುವಿನ ತಂಗಿಯು, ಅಕ್ಕನೊಂದಿಗೆ ಅತ್ತೆಯ ಮನೆಗೆ ಹೋಗುವುದು.
ಇನ್ನು ಅಂತಿಮ ಹಾಗೂ ಕೊನೆಯ ಮೂರನೇ ಷರತ್ತು ವಧುವಿನ ತಂದೆ ತನ್ನ ಮಗಳ ಅತ್ತೆಯ ಮನೆಗೆ ಯಾವಾಗ ಬೇಕಾದರೂ ಭೇಟಿ ನೀಡಲು ಅವಕಾಶ ನೀಡಬೇಕು, ಯಾವುದೇ ಕಾರಣಕ್ಕೂ ಯಾರೂ ಇದನ್ನ ತಡೆಯುವಂತಿಲ್ಲ ಎಂಬ ಕೋರಿಕೆಯನ್ನ ವರನ ಮುಂದೆ ಇಡಲಾಯಿತು. ಈ ಮೂರು ಷರತ್ತುಗಳನ್ನು ಕೇಳಿದ ವರ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾನೆ. ಅಷ್ಟೇ ಅಲ್ಲ ಆ ಷರತ್ತುಗಳನ್ನು ತನ್ನಿಂದ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ನಿರಾಕರಿಸಿದ್ದಾನೆ.
ವಧುವಿನ ಕಡೆಯವರ ಈ ಅಸಾಧ್ಯದ ಷರತ್ತುಗಳಿಂದಾಗಿ ಬೀಳ್ಕೊಡುಗೆ ಸಮಾರಂಭವನ್ನೇ ಸ್ಥಗಿತಗೊಳಿಸಲಾಗಿದೆ. ವರ ಈ ಷರತ್ತುಗಳನ್ನ ತಳ್ಳಿ ಹಾಕಿದ್ದರಿಂದ ವಧು ತನ್ನ ಅತ್ತೆಯ ಮನೆಗೆ ಹೋಗದೇ ತನ್ನ ತಂದೆ ಮತ್ತು ಸಹೋದರಿಯೊಂದಿಗೆ ತಮ್ಮ ಮನೆಗೆ ಮರಳಬೇಕಾಯಿತು. ವರ ಮತ್ತು ಕುಟುಂಬದವರು ಬರುವಾಸಾಗರ ಠಾಣೆಗೆ ಆಗಮಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮದುವೆ ಸಮಾರಂಭಕ್ಕೆ 10 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ದೂರಿನಲ್ಲಿ ವರನ ಕಡೆಯವರು ಮಾಹಿತಿ ನೀಡಿದ್ದಾರೆ. ವಧುವಿಗೆ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ನೀಡಲಾಗಿದೆ. ಮದುವೆಯ ನಂತರ ವಧುವಿನ ತಂದೆ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಬರುಸಾಗರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಜ್ಮೀರ್ ಸಿಂಗ್ ಭಡೋರಿಯಾ, ಮಾತನಾಡಿ, ಮದುವೆ ಮುರಿದು ಬಿದ್ದಿರುವ ಬಗ್ಗೆ ದೂರು ದಾಖಲಾಗಿದೆ. ವಧು ವರನೊಂದಿಗೆ ಆತನ ಮನೆಗೆ ತೆರಳಲು ನಿರಾಕರಿಸಿದ್ದಾಳೆ. ಹಾಗೂ ಷರತ್ತುಗಳನ್ನು ಒಪ್ಪಲು ವರ ನಿರಾಕರಿಸಿದ್ದಾನೆ. ಈ ಸಂಬಂಧ ದೂರು ದಾಖಲಾಗಿದೆ. ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಇದನ್ನು ಓದಿ:ಯುವತಿಯನ್ನು ಕಾರಿನಲ್ಲಿ ಸುತ್ತಾಡಿಸಿ ಕೊಂದು ಮ್ಯಾನ್‌ಹೋಲ್‌ಗೆಸೆದ ಅರ್ಚಕ: ಹೈದರಾಬಾದ್‌ನಲ್ಲೊಂದು ಭೀಕರ ಹತ್ಯೆ!