ಭೋಪಾಲ್, ಮಧ್ಯಪ್ರದೇಶ: ದೇಶದಲ್ಲಿ ಕೊರೊನಾ ಆತಂಕದ ನಡುವೆ ಮತ್ತಷ್ಟು ಆತಂಕ ಸೃಷ್ಟಿಸಿದ ಬಣ್ಣ ಬಣ್ಣದ ಫಂಗಸ್ ರೋಗಗಳು ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಹಸಿರು ಫಂಗಸ್ ಮಧ್ಯಪ್ರದೇಶದಲ್ಲಿ ಕಾಣಿಸಿಕೊಂಡಿದೆ.
ಈವರೆಗೆ ಕಪ್ಪು, ಬಿಳಿ, ಹಳದಿ ಮತ್ತು ಕ್ರೀಮ್ ಬಣ್ಣದ ಫಂಗಸ್ಗಳು ಕಾಣಿಸಿಕೊಂಡಿದ್ದು, ಹಸಿರು ಫಂಗಸ್ ಹೊಸದಾಗಿ ಸೇರ್ಪಡೆಯಾಗಿದೆ. ಇದು ದೇಶದ ಮೊದಲ ಪ್ರಕರಣ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಒಂದು ತಿಂಗಳ ಹಿಂದೆ ಏಮ್ಸ್ ವೈದ್ಯರಾದ ರಂದೀಪ್ ಗುಲೇರಿಯಾ ಫಂಗಸ್ನ ಬಣ್ಣದ ವಿಚಾರವಾಗಿ ಸಂದೇಹಗಳಿವೆ ಎಂದು ಹೇಳಿದ್ದರು.
ಅಲರ್ಜಿಯಿಂದ ಉಂಟಾಗುವ ಆಸ್ಪರ್ಜಿಲ್ಲೋಸಿಸ್ ಸೋಂಕಿಗೆ ಹಸಿರು ಫಂಗಸ್ ಕಾರಣವಾಗಲಿದ್ದು, ಜ್ವರ, ಎದೆನೋವು, ಕೆಮ್ಮು, ಕೆಮ್ಮಿದಾಗ ರಕ್ತ ಬರುವುದು ಮುಂತಾದ ಲಕ್ಷಣಗಳು ಇರುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಹೊಸ ಸೋಂಕಿತರಲ್ಲಿ ಸ್ವಲ್ಪ ಏರಿಕೆ; ಈವರೆಗೆ 26 ಕೋಟಿ ಮಂದಿಗೆ ವ್ಯಾಕ್ಸಿನ್
ಈಗ ಸದ್ಯಕ್ಕೆ ಹಸಿರು ಫಂಗಸ್ ಕಾಣಿಸಿಕೊಂಡ ವ್ಯಕ್ತಿಯನ್ನು ಮುಂಬೈಗೆ ಕಳುಹಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಇಂದೋರ್ನಲ್ಲಿರುವ ಶ್ರೀ ಅರಬಿಂದೋ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಸೈಮ್ಸ್)ನ ಮುಖ್ಯಸ್ಥ ಡಾ. ರವಿ ದೋಸಿ ಹೇಳಿದ್ದಾರೆ,.
ಇದು ಬ್ಲಾಕ್ ಫಂಗಸ್ಗಿಂತ ಅಪಾಯಕಾರಿಯಲ್ಲ ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ಸಂಶೋಧನೆಯ ನಂತರವಷ್ಟೇ ಈ ಫಂಗಸ್ ಅಪಾಯಕಾರಿಯೋ ಅಥವಾ ಅಪಾಯಕಾರಿಯಲ್ಲವೋ ಎಂಬುದು ಗೊತ್ತಾಗಲಿದೆ.