ಡೆಹ್ರಾಡೂನ್(ದೆಹಲಿ): ಇಂಗ್ಲಿಷ್ನಲ್ಲಿ ಮಾತನಾಡಿದ್ದಕ್ಕೆ ನೇಪಾಳಿಗ ಎಂದುಕೊಂಡು ಆತನ ಮೇಲೆ ನಾಯಿಯನ್ನು ಚೂ ಬಿಟ್ಟು ವ್ಯಕ್ತಿಯೊಬ್ಬನನ್ನು ಗಾಯಗೊಳಿಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಅದೂ ಕೂಡ 4 ಬಾರಿ ನಾಯಿಯಿಂದ ಕಚ್ಚಿಸಿದ್ದು, ಈ ಬಗ್ಗೆ ಗಾಯಾಳು ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ದೆಹಲಿಯಲ್ಲಿರುವ ಡೆಹ್ರಾಡೂನ್ ನಿವಾಸಿ, ಮಾಜಿ ಲೆಫ್ಟಿನೆಂಟ್ ಸಿ.ವಿ. ಬಹದ್ದೂರ್ ಅವರ ಮೊಮ್ಮಗ ಅಂಶುಮಾನ್ ಥಾಪಾ ದಾಳಿಗೆ ಒಳಗಾದವರು. ಅಂಶುಮಾನ್ ಥಾಪಾ ಅವರು ಅಂಗಡಿಗೆ ಹೋದಾಗ ಇಂಗ್ಲಿಷ್ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಕೈಫ್ ಎಂಬಾತ 'ನೀನು ನೇಪಾಳಿಯ' ಎಂದು ಪ್ರಶ್ನಿಸಿದ್ದಾರೆ. ಅಲ್ಲ ಎಂದು ಅಂಶುಮಾನ್ ಥಾಪಾ ಹೇಳಿದರೂ ಬಿಡದ ಆ ವ್ಯಕ್ತಿ ಜಗಳ ತೆಗೆದು ಹಲ್ಲೆಗೆ ಮುಂದಾಗಿದ್ದಾನೆ.
ಈ ವೇಳೆ ಕೈಫ್ನ ನಾಯಿ ಅಂಶುಮಾನ್ ಥಾಪಾ ಮೇಲೆ ದಾಳಿ ಮಾಡಿದೆ. ಇದನ್ನು ತಡೆಯದ ಕೈಫ್ ಕಚ್ಚಲು ಪ್ರೇರೇಪಿಸಿದ್ದಾನೆ. ನಾಯಿಯ ದಾಳಿಯಿಂದ ಗಾಯಗೊಂಡ ಥಾಪಾ ತಪ್ಪಿಸಿಕೊಂಡು ಅಂಗಡಿಯೊಳಕ್ಕೆ ಓಡಿ ಹೋಗಿದ್ದಾನೆ. ಆದರೂ ಬಿಡದ ಕೈಫ್ ಮತ್ತು ಆತನ ನಾಯಿ ಪದೇ ಪದೇ ದಾಳಿ ಮಾಡಿಸಿ ಕಚ್ಚಿಸಿದ್ದಾನೆ.
ಹೇಗೋ ಮನೆಗೆ ವಾಪಸಾದ ಬಳಿಕ ಅಂಶುಮಾನ್ ಥಾಪಾ ಸ್ಥಿತಿಯನ್ನು ನೋಡಿದ ಸ್ನೇಹಿತರು ಗಾಬರಿಯಾಗಿದ್ದಾರೆ. ನಡೆದ ಘಟನೆ ವಿವರಿಸಿದ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಣ್ಮರೆಯಾಗಿರುವ ನಾಯಿ ದಾಳಿಕೋರ ಕೈಫ್ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಓದಿ: ಕೋಳಿ ಬಲಿ ನೋಡ್ತಿದ್ದಂಗೆ ದಿಢೀರ್ ಹಾರಿ ಮರವೇರಿತು ಹುಂಜ.. ಸಾವಿನ ದವಡೆಯಿಂದ ಪಾರು!