ಮುಜಾಫರ್‌ಪುರ(ಬಿಹಾರ): ಸೊಸೆ ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂಬ ಕೋಪದಲ್ಲಿ ಎರಡು ತಿಂಗಳ ಹೆಣ್ಣು ಮಗುವನ್ನು ಮಹಿಳೆಯೊಬ್ಬರು ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಹೂತು ಹಾಕಿದ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಹಾಥೋರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮ ಸೊಹಿಜನ್ ಗ್ರಾಮದಲ್ಲಿ ಮಂಗಳವಾರ ಘಟನೆ ನಡೆದಿದೆ. ಆರೋಪಿಗಳಾದ ಮಗುವಿನ ಅಜ್ಜಿ ಸರೋಜಾ ದೇವಿ ಮತ್ತು ಅಜ್ಜ ಅಶೋಕ್ ಓಜಾ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ದುಷ್ಕೃತ್ಯ ಇಡೀ ಪ್ರದೇಶದಲ್ಲಿ ಆಘಾತ ಹಾಗೂ ಸಂಚಲನಕ್ಕೆ ಕಾರಣವಾಗಿದೆ.
ಘಟನೆಯ ಸಂಪೂರ್ಣ ವಿವರ: ಸರೋಜಾ ದೇವಿ-ಅಶೋಕ್ ಓಜಾ ದಂಪತಿಗೆ ಧೀರಜ್ ಓಜಾ ಎಂಬ ಪುತ್ರ ಇದ್ದಾನೆ. ಈತನಿಗೆ ಕಟ್ರಾದ ಜಾಜುವಾರ್ ನಿವಾಸಿ ಕೋಮಲ್ ಕುಮಾರಿ ಎಂಬವರೊಂದಿಗೆ ವಿವಾಹ ಮಾಡಿಸಲಾಗಿದೆ. ತಮ್ಮ ಮನೆಯಲ್ಲಿ ಮೊದಲ ಮಗು ಗಂಡು ಆಗಬೇಕೆಂದು ಅಜ್ಜ-ಅಜ್ಜಿ ಹಾಗೂ ಕುಟುಂಬಸ್ಥರು ಬಯಸಿದ್ದರು. ಆದರೆ, ಎರಡು ತಿಂಗಳ ಹಿಂದೆ ಕೋಮಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಎಲ್ಲರೂ ಕೋಪಗೊಂಡಿದ್ದಾರೆ. ಅಲ್ಲದೇ, ಅತ್ತೆ -ಮಾವ ಇಬ್ಬರೂ ನನಗೆ ಹೊಡೆದು ಚಿತ್ರಹಿಂಸೆ ನೀಡಲು ಆರಂಭಿಸಿದ್ದರು ಎಂದು ಸೊಸೆ ಕೋಮಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಎರಡು ದಿನಗಳ ಹಿಂದೆ ಎಲ್ಲರೂ ಮನೆಯಲ್ಲಿದ್ದರು. ಈ ಸಮಯದಲ್ಲಿ ನಾನು ಮಗುವಿಗೆ ಕುಡಿಸಲು ಹಾಲು ಕಾಯಿಸಲು ಅಡುಗೆ ಮನೆಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಅಜ್ಜಿ ಮಗುವನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಹೋಗಿದ್ದರು. ಬಳಿಕ ಮಗುವಿಗಾಗಿ ಇಡೀ ದಿನ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ತನಿಖೆ ಆರಂಭಿಸಿದ 24 ಗಂಟೆಗಳ ಬಳಿಕ ಮೃತದೇಹವು ಮನೆಯಿಂದ ಅರ್ಧ ಕಿಲೋಮೀಟರ್ ದೂರದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಯಿತು ಎಂದು ತಿಳಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಪೊಲೀಸರು ಹೆಚ್ಚಿನ ತನಿಖೆಗಾಗಿ ಮಗುವಿನ ಅಜ್ಜಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಎಫ್‌ಐಆರ್ ದಾಖಲಿಸಿಕೊಂಡು ಸರೋಜಾ ದೇವಿ ಮತ್ತು ಪತಿ ಅಶೋಕ್ ಓಜಾನನ್ನು ಬಂಧಿಸಲಾಗಿದೆ. ಮತ್ತಷ್ಟು ವಿಚಾರಣೆಯ ಬಳಿಕ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಾಥೋರಿ ಠಾಣೆಯ ಪ್ರಭಾರಿ ಅಲೋಕ್ ಕುಮಾರ್ ಮಾಹಿತಿ ನೀಡಿದರು.
ಇದನ್ನೂ ಓದಿ: ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಹೋಗಿದ್ದ ಆರೋಪಿ ಜೈಲು ಪಾಲು