ನವದೆಹಲಿ: ದೇಶದಲ್ಲಿನ ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಲೋಕಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಸ್ಪಷ್ಟನೆ ನೀಡಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಸೇರಿದಂತೆ ದೇಶದ ಯಾವುದೇ ರೈತರ ಸಾಲ ಮನ್ನಾ ಮಾಡುವ ಪ್ರಸ್ತಾಪವಿಲ್ಲ. 2008ರಿಂದ ಕೇಂದ್ರ ಸರ್ಕಾರ ಕೃಷಿ ಸಾಲ ಮನ್ನಾ ಮತ್ತು ಸಾಲ ಪರಿಹಾರ ಯೋಜನೆ(ADWDRS) ಅಡಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ.
ಈ ವೇಳೆ ಅವರು, ರೈತರಿಗೋಸ್ಕರ ಕೇಂದ್ರ ಸರ್ಕಾರ ಆರ್ಬಿಐ ಅಡಿ ತೆಗೆದುಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, 3ಲಕ್ಷ ರೂ.ವರೆಗೆ ರೈತರು ಪಡೆದುಕೊಳ್ಳುವ ಅಲ್ಪಾವಧಿ ಸಾಲಕ್ಕೆ ಕಡಿಮೆ ಬಡ್ಡಿದರ ಹಾಗೂ ಮೇಲಾಧಾರ ರಹಿತ ಕೃಷಿ ಸಾಲದ ಮಿತಿ 1 ಲಕ್ಷ ರೂದಿಂದ 1.6 ಲಕ್ಷ ರೂಗೆ ಏರಿಸುವ ನಿರ್ಧಾರ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿ ರೈತರಿಗೆ ನೀಡಲಾಗುತ್ತಿರುವ 6 ಸಾವಿರ ರೂ. ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿರಿ: ಮಧ್ಯಪ್ರದೇಶದಲ್ಲಿ ಮಹಾಮಳೆ : ಮದುವೆಗೆ ತೆರಳಿ ಪ್ರವಾಹ ಪೀಡಿತ ಕಟ್ಟಡದಲ್ಲಿ ಸಿಲುಕಿದ 60 ಜನರು
ತೊಂದರೆಗೊಳಗಾಗಿರುವ ಬಡ ರೈತರ ಹಿತ ಕಾಪಾಡುವ ದೃಷ್ಠಿಯಿಂದ ಕೇಂದ್ರ ಸರ್ಕಾರ ಭಾರತೀಯ ರಿಜರ್ವ್ ಬ್ಯಾಂಕ್ ಅಡಿ ಅನೇಕ ಯೋಜನೆ ಜಾರಿಗೊಳಿಸಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.