ನವದೆಹಲಿ: ಸರ್ಕಾರಿ ಅಧಿಕಾರಿಗಳು ನಿವೃತ್ತಿಯಾದ ಕೂಡಲೇ ಖಾಸಗಿ ವಲಯದ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿದ ಉದಾಹರಣೆಗಳನ್ನು ಗಮನಿಸಿದ ಕೇಂದ್ರ ವಿಚಕ್ಷಣ ಆಯೋಗ (ಸಿವಿಸಿ- Central Vigilance Commission ) ಇದರ ವಿರುದ್ಧ ಕಳವಳ ವ್ಯಕ್ತಪಡಿಸಿದೆ.
ನಿವೃತ್ತಿಯಾಗುತ್ತಿದ್ದಂತೆಯೇ ಯೋಚನೆ ಮಾಡದೇ ಖಾಸಗಿ ಉದ್ಯೋಗ ಪ್ರಸ್ತಾಪವನ್ನು ಸ್ವೀಕರಿಸುವುದು ಗಂಭೀರವಾದ ದುರ್ನಡತೆ ಎಂದು ಸಿವಿಸಿ ಹೇಳಿದ್ದು, ಎಲ್ಲಾ ಸರ್ಕಾರಿ ಸಂಸ್ಥೆಗಳು ತನ್ನ ಉದ್ಯೋಗಿಗಳಿಗೆ ನಿವೃತ್ತಿಯ ನಂತರ ಕೂಲಿಂಗ್-ಆಫ್ ಅವಧಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಲು ಸೂಕ್ತ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಬೇಕೆಂದು ಕೇಂದ್ರ ಸರ್ಕಾರದ ಇಲಾಖೆಗಳ ಕಾರ್ಯದರ್ಶಿಗಳಿಗೆ, ಸಾರ್ವಜನಿಕ ವಲಯದ ಬ್ಯಾಂಕ್ಗಳ ಮುಖ್ಯಸ್ಥರಿಗೆ ಆದೇಶ ನೀಡಿದೆ.
ಕೂಲಿಂಗ್-ಆಫ್ ಅವಧಿ
ಒಬ್ಬ ವ್ಯಕ್ತಿ ತನ್ನ ನಿರ್ಧಾರದ ಬಗ್ಗೆ ಸರಿಯಾಗಿ ಯೋಚಿಸಲು ಇರುವ ಅಥವಾ ತೆಗೆದುಕೊಳ್ಳುವ ಸಮಯವನ್ನು ಕೂಲಿಂಗ್-ಆಫ್ ಅವಧಿ ಎಂದು ಕರೆಯುತ್ತಾರೆ.
ಇನ್ನು ಇಲಾಖೆಗಳು ರೂಪಿಸಿದ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ನಿವೃತ್ತ ನೌಕರರು ಉಲ್ಲಂಘಿಸಿದಲ್ಲಿ ಅಗತ್ಯವಿದ್ದರೆ ಅವರ ವಿರುದ್ಧ ಸಹ ಸೂಕ್ತ ಕ್ರಮವನ್ನು ಕೈಗೊಳ್ಳಬಹುದು ಎಂದು ತಿಳಿಸಿದೆ.
ಸರ್ಕಾರಿ ಸಂಸ್ಥೆಗಳಿಗೂ ನಿಯಮ ಅನ್ವಯ
ಖಾಸಗಿಯಲ್ಲದೇ ನಿವೃತ್ತ ಸರ್ಕಾರಿ ನೌಕರರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡುವ ಎಲ್ಲಾ ಸರ್ಕಾರಿ ಸಂಸ್ಥೆಗಳು ಕಡ್ಡಾಯವಾಗಿ ಸಿವಿಸಿಯಿಂದ ಅನುಮತಿ (ವಿಜಿಲೆನ್ಸ್ ಕ್ಲಿಯರೆನ್ಸ್) ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಂದು ವೇಳೆ ನಿವೃತ್ತ ಅಧಿಕಾರಿಯೊಬ್ಬರು ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದರೆ, ನಿವೃತ್ತ ಅಧಿಕಾರಿ ನಿವೃತ್ತಿಗೆ 10 ವರ್ಷಗಳ ಮೊದಲು ಸೇವೆ ಸಲ್ಲಿಸಿದ ಎಲ್ಲ ಸಂಸ್ಥೆಗಳಿಂದ ವಿಜಿಲೆನ್ಸ್ ಕ್ಲಿಯರೆನ್ಸ್ ಪಡೆಯಬೇಕು. ನಿವೃತ್ತಿ ಅವಧಿ ಮುನ್ನವೇ ಸರ್ಕಾರಿ ಅಧಿಕಾರಿಗಳನ್ನು ಪೂರ್ಣಾವಧಿಗೆ ನೇಮಕ ಮಾಡಿಕೊಳ್ಳುವ ಸಂಸ್ಥೆಗಳೀಗೆ ವಿಜಿಲೆನ್ಸ್ ಕ್ಲಿಯರೆನ್ಸ್ ನೀಡಲಾಗುವುದಿಲ್ಲ ಎಂದು ಕೂಡ ಸೂಚಿಸಲಾಗಿದೆ.