ಅಲ್ಮೋರಾ(ಉತ್ತರಾಖಂಡ): ಹೆರಿಗೆಗೋಸ್ಕರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮೇಲೆ ವೈದ್ಯರೇ ಹಲ್ಲೆ ನಡೆಸಿದ್ದು, ಇದರಿಂದ ನವಜಾತ ಶಿಶು ಸಾವನ್ನಪ್ಪಿದೆ ಎಂದು ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ. ಉತ್ತರಾಖಂಡದ ಅಲ್ಮೋರಾದಲ್ಲಿ ಕಳೆದ ಭಾನುವಾರ ಈ ಘಟನೆ ನಡೆದಿದೆ. ಉತ್ತಮ ಆರೋಗ್ಯ ಸೇವೆ ನೀಡುತ್ತೇವೆ ಎಂದು ಧಾಮಿ ಸರ್ಕಾರ ಬಡಾಯಿ ಕೊಚ್ಚುಕೊಳ್ಳುವ ಬೆನ್ನಲ್ಲೇ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ರಾಮ್ ಮತ್ತು ಲೋಹಾನಿ ಬಾಗೇಶ್ವರ ಜಿಲ್ಲೆಯ ಗರಿಗಡ್ ಗ್ರಾಮದ ನಿವಾಸಿಗಳಾಗಿದ್ದು, ಹೆರಿಗೆ ನೋವಿನಿಂದ ಬಳಲುತ್ತಿದ್ದ ಸೊಸೆ ಪೂಜಾಳನ್ನ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ತಡರಾತ್ರಿ ಪೂಜಾ ಮಗುವಿಗೆ ಜನ್ಮ ನೀಡಿದ್ದಾಳೆ. ಇದಾದ ಬಳಿಕ ಹೆಚ್ಚಿನ ಚಿಕಿತ್ಸೆಗೋಸ್ಕರ ತಾಯಿ ಹಾಗೂ ಮಗುವನ್ನ ಅಲ್ಮೋರಾದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ನವಜಾತ ಶಿಶು ಸಾವನ್ನಪ್ಪಿದೆ.
ಇದನ್ನೂ ಓದಿರಿ: ಹರಿಯಾಣದಲ್ಲೊಬ್ಬ ದಶರಥ್ ಮಾಂಜಿ: 50 ವರ್ಷ ಬೆಟ್ಟ ಅಗೆದು ನೀರಿನ ಕೊಳ ನಿರ್ಮಿಸಿದ 90ರ ಕಲ್ಲುರಾಮ್!
ಚಿಕಿತ್ಸೆ ನೀಡಲು ವೈದ್ಯರು ನಿರ್ಲಕ್ಷ್ಯ ವಹಿಸಿದ್ದು, ಇದೇ ಕಾರಣಕ್ಕಾಗಿ ನವಜಾತ ಶಿಶು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಹೆರಿಗೆ ವೇಳೆ ನನ್ನ ಮೇಲೆ ವೈದ್ಯರು ಹಲ್ಲೆ ನಡೆಸಿದ್ದಾರೆ ಎಂದು ಖುದ್ದಾಗಿ ಸಂತ್ರಸ್ತೆ ಆರೋಪ ಮಾಡಿದ್ದಾಳೆ. ನನ್ನ ಮಗುವಿನ ಸಾವಿಗೆ ವೈದ್ಯರೇ ಕಾರಣ ಎಂದು ಹೇಳಿದ್ದಾಳೆ. ಘಟನೆ ಬೆನ್ನಲ್ಲೇ ಆಸ್ಪತ್ರೆಯ ಪ್ರಭಾರಿ ಸಿಎಂಎಸ್ ಡಾ. ಪ್ರೀತಿ ಪಂತ್ ಕಾಣೆಯಾಗಿದ್ದು, ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.