ಗೋಪಾಲ್‌ಗಂಜ್: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬಿಹಾರದ ಗೋಪಾಲ್‌ಗಂಜ್‌ನ ಬರೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಗೋಪಾಲ್‌ಗಂಜ್‌ನ ಚಂದನ್ ಟೋಲಾ ಗ್ರಾಮದ ನಿವಾಸಿ ರಾಮ್‌ಸುರತ್ ಮಹತೋ ಮತ್ತು ಅವರ ಇಬ್ಬರು ಪುತ್ರರಾದ ದೀಪಕ್ ಕುಮಾರ್ ಮತ್ತು ಸಚಿನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿಯ ಸದರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆಗೆ ಕಾರಣ: ಸಾಮೂಹಿಕ ಆತ್ಮಹತ್ಯೆಗೆ ಅನಾರೋಗ್ಯ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಇಡೀ ಕುಟುಂಬ ಇದರಿಂದ ಮಾನಸಿಕವಾಗಿ ನೊಂದಿತ್ತು. ಮೃತ ರಾಮ್‌ಸುರತ್ ಮಹತೋ ಅವರಿಗೆ ಓರ್ವ ಪುತ್ರಿ, ಇಬ್ಬರು ಪುತ್ರರಿದ್ದರು. ದೀಪಕ್ ಎಂಬಾತ ಬಾಲ್ಯದಿಂದಲೂ ಅಂಗವಿಕಲನಾಗಿದ್ದರೆ, ಪುತ್ರಿ ಸುಭಾವತಿ ಐದು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಪುತ್ರಿ ಎರಡು ದಿನಗಳ ಹಿಂದೆ ಅಷ್ಟೇ ಮೃತಪಟ್ಟಿದ್ದಳು. ಮತ್ತೊಬ್ಬ ಮಗ ಸಚಿನ್ ಎಂಬಾತ ಸೂರತ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ನಿನ್ನೆ ರಾತ್ರಿಯಷ್ಟೇ ಆತ ಮನೆಗೆ ಬಂದಿದ್ದನಂತೆ. ಆದರೆ, ಅಕ್ಕಪಕ್ಕದ ಯಾರಿಗೂ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಮಗಳ ಸಾವಿನಿಂದ ಇಡೀ ಕುಟುಂಬವು ಮಾನಸಿಕ ಸಮತೋಲನ ಕಳೆದುಕೊಂಡಿತ್ತು ಎಂದು ಸ್ಥಳೀಯ ಕಾಂಚನ್ ಕುಮಾರ್ ಸಿಂಗ್ ಎಂಬಾತ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ಮೂವರು ರೈಲಿಗಾಗಿ ಕಾಯುತ್ತಾ ರೈಲ್ವೇ ಹಳಿಯ ಮೇಲೆ ಕುಳಿತಿದ್ದರು. ಆದರೆ, ಕೆಲವು ಸಮಯದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಬಂದಿತು. ಮಾಹಿತಿ ಪಡೆದ ಬರೌಲಿ ಠಾಣೆ ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅನಾರೋಗ್ಯ ಹಾಗೂ ಪುತ್ರಿಯ ಸಾವು ಇಡೀ ಕುಟುಂಬವನ್ನು ಚಿಂತೆಗೆ ತಳ್ಳಿತ್ತು. ರಾಮ್‌ಸುರತ್ ಮಹತೋ ಅವರ ಪತ್ನಿ ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದರು ಅಂದು ದಿಲೀಪ್ ಕುಮಾರ್ ಎಂಬಾತ ಕುಟುಂಬ ತೆಗೆದುಗೊಂಡ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದರು. ಸದ್ಯ ಗೋಪಾಲ್‌ಗಂಜ್‌ನ ಬರೌಲಿ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ಕೇರಳ: ಯುವ ವೈದ್ಯೆಯ ಆತ್ಮಹತ್ಯೆ ಪ್ರಕರಣ; ಸಹೋದ್ಯೋಗಿ ಪೊಲೀಸ್ ವಶಕ್ಕೆ