ಮುಂಬೈ(ಮಹಾರಾಷ್ಟ್ರ): ಕೊರೊನಾ ಮಾಹಾಮಾರಿ ವೇಳೆ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯವಾಗಿದೆ. ಈಗಲೂ ಈ ನಿಯಮ ಜಾರಿಯಲ್ಲಿದೆ. ಆದರೆ, ಕಳೆದ ಕೆಲ ದಿನಗಳಿಂದ ದೇಶದಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿದೆ. ಇದೇ ಕಾರಣಕ್ಕಾಗಿ ವಾಣಿಜ್ಯ ನಗರಿ ಮುಂಬೈ ಮಾಸ್ಕ್ ಮುಕ್ತವಾಗಲಿದೆ. ಮುಖಗವಸು ಹಾಕಿಕೊಳ್ಳುವ ಕಡ್ಡಾಯ ನಿಯಮ ಶೀಘ್ರದಲ್ಲೇ ರದ್ದುಗೊಳಿಸಲು ಅಲ್ಲಿನ ಮಹಾನಗರ ಪಾಲಿಕೆ ಮುಂದಾಗಿದೆ.
ದೇಶದಲ್ಲಿ ಕೊರೊನಾ ಹಾವಳಿ ಶುರುವಾದಾಗಿನಿಂದಲೂ ಜನರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಮ್ಮ ದಿನನಿತ್ಯದ ಕೆಲಸದಲ್ಲಿ ಭಾಗಿಯಾಗುವಂತಹ ಅನಿವಾರ್ಯತೆ ನಿರ್ಮಾಣಗೊಂಡಿದೆ. ಆದರೆ, ದೇಶದಲ್ಲಿ ಕೋವಿಡ್ ಸೋಂಕಿತ ಪ್ರಕರಣ ಇದೀಗ ಕಡಿಮೆಯಾಗಿದ್ದು, ಮಹಾರಾಷ್ಟ್ರದ ಮುಂಬೈನಲ್ಲೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ, ಮಾಸ್ಕ್ ಕಡ್ಡಾಯ ನಿಯಮ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಮಹಾನಗರ ಪಾಲಿಕೆ ಮುಂದಿನ ನಾಲ್ಕೈದು ದಿನಗಳಲ್ಲಿ ಈ ಘೋಷಣೆ ಹೊರ ಹಾಕಲಿದೆ.
ಇದನ್ನೂ ಓದಿ: ಐಪಿಎಲ್ ವೀಕ್ಷಣೆಗೆ ಶೇ. 25ರಷ್ಟು ಪ್ರೇಕ್ಷಕರಿಗೆ ಅವಕಾಶ; ಟಿಕೆಟ್ ಮಾರಾಟ ಈಗಾಗಲೇ ಶುರು
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಾಲಿಕೆ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಣಿ, ಮಾಸ್ಕ್ ಕಡ್ಡಾಯ ನಿಯಮ ಸಡಿಲಗೊಳಿಸಲು ಮುಂದಾಗಿದ್ದು, ಮಾರ್ಷಲ್ಗಳಿಗೆ ನೀಡಿರುವ ಅಧಿಕಾರ ಹಿಂಪಡೆದುಕೊಳ್ಳಲು ಮುಂದಾಗಿದ್ದೇವೆ. ಮಾಸ್ಕ್ ಕಡ್ಡಾಯ ನಿಯಮ ಹಿಂಪಡೆದುಕೊಳ್ಳುವ ಪ್ರಸ್ತಾವನೆ ಸಿದ್ಧಪಡಿಸಲಾಗ್ತಿದೆ.
ಮುಂದಿನ ಕೆಲ ದಿನಗಳಲ್ಲಿ ಈ ನಿರ್ಧಾರ ಹೊರಬರಲಿದೆ ಎಂದು ತಿಳಿಸಿದ್ದಾರೆ. ಕೋವಿಡ್ ಉತ್ತುಂಗದಲ್ಲಿದ್ದ ವೇಳೆ ಕಡ್ಡಾಯವಾಗಿ ಮುಖವಾಡ ಹಾಕಿಕೊಳ್ಳುವಂತೆ ಮುಂಬೈ ಜನರಿಗೆ ಸೂಚನೆ ನೀಡಲಾಗಿತ್ತು. ಮಾಸ್ಕ್ ಧರಿಸಲು ವಿಫಲವಾದವರಿಗೆ ದಂಡ ಸಹ ವಿಧಿಸಲಾಗಿದೆ. ಮಹಾನಗರ ಪಾಲಿಕೆ ನಿರ್ಧಾರಕ್ಕೆ ಹೆದರಿ ಎಲ್ಲರೂ ನಿಯಮ ಪಾಲನೆ ಮಾಡಿರುವ ಕಾರಣ ಇದೀಗ 3ನೇ ಅಲೆ ಹತೋಟಿಗೆ ಬಂದಿದೆ.
ದೇಶದಲ್ಲಿ ಜಾರಿಯಲ್ಲಿರುವ ಕೋವಿಡ್ ನಿಯಮಾವಳಿಗಳು/ಮಾರ್ಗಸೂಚಿಗಳು ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿವೆ. ಕೇಂದ್ರ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಹಿತಿ ಸಹ ಹಂಚಿಕೊಂಡಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಮಾತ್ರ ಕಡ್ಡಾಯವಾಗಿರಲಿದೆ.