ಮಲಪ್ಪುರಂ: ಮಲಪ್ಪುರಂ ಜಿಲ್ಲೆಯ ಕರಿಪುರ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಅಕ್ರಮವಾಗಿ ತಂದ ಚಿನ್ನವನ್ನು ನಿಲ್ದಾಣದಿಂದ ಹೊರಗೆ ಒಯ್ಯಲು ಪ್ರಯತ್ನಿಸುತ್ತಿದ್ದ, ಇಂಡಿಗೋ ಏರ್‌ಲೈನ್‌ನ ಇಬ್ಬರು ಉದ್ಯೋಗಿಗಳನ್ನು ಬಂಧಿಸಲಾಗಿದೆ. ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಸಾಜಿದ್ ರೆಹಮಾನ್ ಮತ್ತು ಗ್ರಾಹಕ ಸೇವಾ ಏಜೆಂಟ್ ಮೊಹಮ್ಮದ್ ಸಾಮಿಲ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ, 4.9 ಕೆಜಿ ಚಿನ್ನದ ಮಿಶ್ರಣವನ್ನು ವಶಪಡಿಸಿಕೊಳ್ಳಲಾಗಿದೆ.
ದುಬೈನಿಂದ ಬಂದಿದ್ದ ವಯನಾಡು ಮೂಲದ ಅಸ್ಕರಾಲಿ ಎಂಬ ಪ್ರಯಾಣಿಕರು ತಂದಿದ್ದ ಚಿನ್ನದ ಪೆಟ್ಟಿಗೆಯನ್ನು ಹೊರತರಲು ಯತ್ನಿಸುತ್ತಿದ್ದಾಗ ಹಿರಿಯ ಕಾರ್ಯನಿರ್ವಹಣಾಧಿಕಾರಿ ಸಾಜಿದ್ ರೆಹಮಾನ್ ಸಿಕ್ಕಿಬಿದ್ದಿದ್ದಾರೆ. ಉದ್ಯೋಗಿಗಳ ಸಹಕಾರದಿಂದ ಚಿನ್ನ ಕಳ್ಳಸಾಗಣೆ ನಡೆಯುತ್ತಿದೆ ಎಂಬ ರಹಸ್ಯ ಮಾಹಿತಿ ಆಧರಿಸಿ ಕಸ್ಟಮ್ಸ್ ನೌಕರರ ಮೇಲೆ ನಿಗಾ ಇರಿಸಿತ್ತು. ಈ ಮಧ್ಯೆ ಕಸ್ಟಮ್ಸ್ ಅಧಿಕಾರಿಗಳು ಸಾಜಿದ್ ರೆಹಮಾನ್ ಅವರನ್ನು ಅನುಮಾನಾಸ್ಪದ ಸ್ಥಿತಿಯಲ್ಲಿ ನೋಡಿದ್ದಾರೆ.
ಪ್ರಯಾಣಿಕರು ತಂದಿದ್ದ ಪೆಟ್ಟಿಗೆಯನ್ನು ಸಾಜಿದ್ ತೆಗೆದುಕೊಳ್ಳಲು ಮುಂದಾಗಿದ್ದನ್ನು, ಅಧಿಕಾರಿಗಳು ಸಿಸಿಟಿವಿ ಮೂಲಕ ಗಮನಿಸುತ್ತಿದ್ದರು. ಕಸ್ಟಮ್ಸ್ ಸ್ಕ್ಯಾನರ್ ವೇಳೆ ಬಾಕ್ಸ್ನಲ್ಲಿ ಚಿನ್ನದ ಮಿಶ್ರಣ ಪತ್ತೆಯಾಗಿದ್ದು, ಕಳ್ಳಸಾಗಣಿಕೆಗೆ ಸಹಕರಿಸಿದ ಸಾಜಿದ್ ಮತ್ತು ಗ್ರಾಹಕ ಸೇವಾ ಏಜೆಂಟ್ ಮೊಹಮ್ಮದ್ ಸಾಮಿಲ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಆರೋಪಿ ಶಿವಶಂಕರ್ಗೆ ಜಾಮೀನು
ಪ್ರಯಾಣಿಕರು ಚಿನ್ನದ ಪೆಟ್ಟಿಗೆಯನ್ನು ಬಿಟ್ಟು ಪರಾರಿಯಾಗುತ್ತಿದ್ದಂತೆ, ಕಸ್ಟಮ್ಸ್ ಅಧಿಕಾರಿಗಳು ಅದನ್ನು ತೆರೆಯಲು ಮತ್ತು ಪರಿಶೀಲಿಸಲು ಮುಂದಾದಾಗ ತಾಂತ್ರಿಕ ದೋಷ ಕಂಡುಬಂದಿದೆ. ನಂತರ ಸಾಕ್ಷಿಗಳು ಮತ್ತು ಏರ್‌ಲೈನ್‌ನ ಇತರ ಉದ್ಯೋಗಿಗಳ ಸಮ್ಮುಖದಲ್ಲಿ ಪೆಟ್ಟಿಗೆಯನ್ನು ತೆರೆಯಲಾಯಿತು. ವಶಪಡಿಸಿಕೊಂಡ ಚಿನ್ನವು 2.5 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಶಕ್ಕೆ ಪಡೆದಿರುವ ಇಬ್ಬರು ಉದ್ಯೋಗಿಗಳು ಈ ಹಿಂದೆ ಚಿನ್ನ ಕಳ್ಳಸಾಗಣೆಗೆ ಸಹಕರಿಸಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತನಿಖೆಯ ವೇಳೆ ಪತ್ತೆ ಹಚ್ಚಿದ್ದಾರೆ.