ಕೊಚ್ಚಿ(ಕೇರಳ): ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣ ಕೇರಳದಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ. ಹಗರಣದಲ್ಲಿ ಸಿಎಂ ಪಿಣರಾಯಿ ವಿಜಯನ್ ಭಾಗಿಯಾಗಿದ್ದಾರೆ ಎಂದು ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ. ಇನ್ನೊಂದೆಡೆ, ಸ್ವಪ್ನಾ ಸುರೇಶ್ ಯಾರೆಂಬುದೇ ನನಗೆ ಗೊತ್ತಿಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಸ್ವಪ್ನಾ ಸುರೇಶ್, "ಸಿಎಂ ಸುಳ್ಳು ಹೇಳುತ್ತಿದ್ದಾರೆ. ಅವರು ಮತ್ತು ಕುಟುಂಬಸ್ಥರನ್ನು ಕ್ಲಿಫ್ ಹೌಸ್ನಲ್ಲಿ ನಾನು ಅನೇಕ ಸಲ ಭೇಟಿ ಮಾಡಿದ್ದೇನೆ. ಇದಕ್ಕೆ ನನ್ನ ಬಳಿ ಸಾಕ್ಷ್ಯ ಇವೆ. ಅಗತ್ಯ ಸಮಯದಲ್ಲಿ ಮಾಧ್ಯಮದ ಮೂಲಕ ಬಹಿರಂಗಪಡಿಸುವೆ" ಎಂದು ಹೇಳಿರುವುದು ಪ್ರಕರಣ ಇನ್ನಷ್ಟು ಗಂಭೀರವಾಗಿದೆ.
ಪ್ರಕರಣವೇನು?: ದುಬೈನಿಂದ ಅಕ್ರಮವಾಗಿ ರವಾನೆ ಮಾಡುತ್ತಿದ್ದ 30 ಕೆಜಿ ಚಿನ್ನವನ್ನು ಸೀಮಾ ಸುಂಕ ಅಧಿಕಾರಿಗಳು 2020ರ ಜುಲೈ 1 ರಂದು ವಶಪಡಿಸಿಕೊಂಡಿದ್ದರು. ತನಿಖೆಯ ವೇಳೆ ಇದರಲ್ಲಿ ಸ್ವಪ್ನಾ ಸುರೇಶ್ ಸೇರಿದಂತೆ ಹಲವರು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ನೋಟಿಸ್ ಜಾರಿ ಮಾಡಿದ ಕಸ್ಟಮ್ಸ್ ಅಧಿಕಾರಿಗಳು ಸ್ವಪ್ನಾ ಸುರೇಶ್ ಮ್ತತಿತರನ್ನು ಬಂಧಿಸಿದ್ದರು.
ಸ್ವಪ್ನಾ ಸುರೇಶ್ ಆರೋಪವೇನು?: ಆರೋಪಿ ಸ್ವಪ್ನಾ ಸುರೇಶ್, ಚಿನ್ನ ಕಳ್ಳ ಸಾಗಣೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬಸ್ಥರ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಇದನ್ನು ನಿರಾಕರಿಸಿರುವ ಸಿಎಂ ಮತ್ತು ಅವರ ಕುಟುಂಬಸ್ಥರು ಸ್ವಪ್ನಾ ಯಾರೆಂಬುದೇ ತಮಗೆ ಗೊತ್ತಿಲ್ಲ. ಯುಎಇ ರಾಯಭಾರಿ ಕಚೇರಿಯ ಮಾಜಿ ಪಿಆರ್‌ಒ ಆಗಿ ಪರಿಚಯಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸಮಜಾಯಿಷಿ ನೀಡಿದ್ದರು.
ಸಿಎಂ ಹೇಳಿಕೆ ವಿರುದ್ಧ ಪ್ರತಿ ಹೇಳಿಕೆ ನೀಡಿರುವ ಸ್ವಪ್ನಾ ಸುರೇಶ್, "ಈ ಪ್ರಕರಣದಲ್ಲಿ ತಮ್ಮನ್ನು ಮಾತ್ರ ಆರೋಪಿಯನ್ನಾಗಿ ಮಾಡಲು ಸಂಚು ರೂಪಿಸಲಾಗುತ್ತಿದೆ. ಸಿಎಂ ಪಿಣರಾಯಿ ಮತ್ತು ಪತ್ನಿ, ಪುತ್ರ, ಪುತ್ರಿಯನ್ನು ನಾನು ಹಲವಾರು ಬಾರಿ ಕ್ಲಿಫ್ ಹೌಸ್ನಲ್ಲಿ ಭೇಟಿ ಮಾಡಿದ್ದೇನೆ. ಚಿನ್ನ ಮತ್ತು ಪ್ರಕರಣದ ಬಗ್ಗೆ ಚರ್ಚಿಸಿದ್ದೇವೆ. ಈ ಬಗ್ಗೆ ಹಲವು ಕ್ರಮಗಳನ್ನೂ ಕೈಗೊಂಡಿದ್ದೇವೆ" ಎಂದು ನಿನ್ನೆ ಹೇಳಿದ್ದಾರೆ.
ಅಲ್ಲದೇ, ಸಿಎಂ ಅವರು ನನ್ನನ್ನು ಮರೆತಿದ್ದರೆ, ಅಗತ್ಯ ಸಮಯದಲ್ಲಿ ಈ ಬಗ್ಗೆ ಸಾಕ್ಷಿ ಸಮೇತ ಮಾಧ್ಯಮಗಳ ಮೂಲಕ ಅವರಿಗೆ ಎಚ್ಚರಿಕೆ ಮಾಡುತ್ತೇನೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳುತ್ತಿರುವ ಸುಳ್ಳನ್ನು ಹೊರಗೆಳೆಯುತ್ತೇನೆ ಎಂದು ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.
2016 ರಲ್ಲಿ ಪಿಣರಾಯಿ ವಿಜಯನ್ ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನ ಕಳ್ಳ ಸಾಗಣೆಗಾಗಿ ಕರೆನ್ಸಿ ತುಂಬಿದ ಬ್ಯಾಗ್ ಅನ್ನು ಯುನೈಟೆಡ್ ಎಮಿರೇಟ್ಸ್(ಯುಎಇ)ಗೆ ಕೊಂಡೊಯ್ದಿದ್ದಾರೆ ಎಂದೂ ಸ್ವಪ್ನಾ ಆರೋಪಿಸಿದ್ದರು.
ರಾಜೀನಾಮೆಗಾಗಿ ಬಿಜೆಪಿ, ಕಾಂಗ್ರೆಸ್ ಪ್ರತಿಭಟನೆ: ಪಿಣರಾಯಿ ವಿಜಯನ್ ವಿರುದ್ಧ ಪ್ರತಿಪಕ್ಷಗಳು ಸಮರ ಸಾರಿವೆ. ಸಿಎಂ ರಾಜೀನಾಮೆ ನೀಡಬೇಕು ಎಂದು ವಿಧಾನಸೌಧ, ಕಾರ್ಯದರ್ಶಿ ಕಚೇರಿ ಮುಂದೆ ನಿರಂತರ ಧರಣಿ ನಡೆಸುತ್ತಿವೆ. ಇಂದು ಕೂಡ ಬಿಜೆಪಿ ಮಹಿಳಾ ಮೋರ್ಚಾ ಮತ್ತು ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಿರುವನಂತಪುರಂನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ.
ಇದನ್ನೂ ಓದಿ: ED ಅಂದ್ರೆ ಎಕ್ಸಾಮಿನೇಶನ್ ಇನ್ ಡೆಮಾಕ್ರಸಿ : ಪ್ರತಿಪಕ್ಷದವರು ಪಾಸು ಮಾಡ್ಲೇಬೇಕು.. ಅಖಿಲೇಶ್ ಯಾದವ್