ಹೈದರಾಬಾದ್: ತೆಲಂಗಾಣದ ಇಂಚಂಪಲ್ಲಿಯಿಂದ ಗೋದಾವರಿ ಹಾಗೂ ಕಾವೇರಿ ನದಿಗಳ ಜೋಡಣೆ ಯೋಜನೆಯನ್ನು ಕಾರ್ಯಗತಗೊಳಿಸಲು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ನಿರ್ಧರಿಸಿದೆ. ವಿಸ್ತೃತ ಕರಡು ಯೋಜನಾ ವರದಿಯ ಪ್ರಕಾರ, ನೀರನ್ನು ಎತ್ತುವ ಮೂಲಕ ಜನಮ್ ಪೇಟ್ನಿಂದ ನಾಗಾರ್ಜುನ ಸಾಗರ ಅಣೆಕಟ್ಟೆಗೆ ನೀರು ತಿರುಗಿಸಬಹುದಾಗಿದೆ. ಅಲ್ಲಿಂದ ಮುಂದಕ್ಕೆ ದಕ್ಷಿಣಾಭಿಮುಖವಾಗಿ ನೀರನ್ನು ತಿರುಗಿಸಿದಲ್ಲಿ, ಪೆನ್ನಾರ ಹಾಗೂ ಕಾವೇರಿ ತೀರದ ನೀರಿನ ಅಗತ್ಯವನ್ನು ಪೂರೈಸಬಹುದಾಗಿದೆ. ಈ ಎಲ್ಲ ವಿಷಯಗಳನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು ಈಗಾಗಲೇ ಸಂಬಂಧಿಸಿದ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿದ್ದು, ಇಂಚಂಪಲ್ಲಿ-ನಾಗಾರ್ಜುನಸಾಗರ ಜೋಡಣೆಗಾಗಿ ಪ್ರಸ್ತಾವನೆಯನ್ನು ತಯಾರಿಸಿದೆ.
ನದಿ ಜೋಡಣೆ ಕಾರ್ಯಪಡೆ ಸಭೆ ಫೆ.25 ರಂದು
ನದಿ ಜೋಡಣೆಗಾಗಿ ರಚಿಸಲಾಗಿರುವ ವಿಶೇಷ ಕಾರ್ಯಪಡೆಯು ಈ ವಿಷಯವನ್ನು ಫೆ.25 ರಂದು ವಿಸ್ತೃತವಾಗಿ ಚರ್ಚಿಸಲಿದೆ. ಈ ಕಾರ್ಯಪಡೆಯು 11 ಜನ ಪರಿಣಿತರನ್ನು ಒಳಗೊಂಡಿದೆ. ಕೇಂದ್ರದ ಜಲಶಕ್ತಿ ಸಚಿವಾಲಯದ ಸಲಹಾಗಾರ ವೇದಿರೆ ಶ್ರೀರಾಮ ಅವರನ್ನು ಸೇರಿಸಿ 10 ಜನ ವಿಶೇಷ ಆಹ್ವಾನಿತ ತಜ್ಞರು ಕಾರ್ಯಪಡೆಯಲ್ಲಿದ್ದಾರೆ. ತಜ್ಞರ ತಂಡವು ದೇಶಾದ್ಯಂತದ ನದಿ ಜೋಡಣೆ ಯೋಜನೆಗಳ ಬಗ್ಗೆ ಚರ್ಚಿಸಲಿದ್ದು, ಗೋದಾವರಿ-ಕಾವೇರಿ ಲಿಂಕ್ ಯೋಜನೆಯ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ. ಇಂಚಂಪಲ್ಲಿಯಲ್ಲಿ 175 ಟಿಎಂಸಿ ಹೆಚ್ಚುವರಿ ನೀರು ಲಭ್ಯವಿದ್ದು, ಇದನ್ನು ಛತ್ತೀಸಗಢ ಕಡೆಗೆ ತಿರುಗಿಸುವುದು ಸೂಕ್ತವಾಗಲಿದೆ ಎನ್ನಲಾಗಿದೆ.
ನದಿ ಜೋಡಣೆ ಪರ್ಯಾಯ ಕರಡು ಯೋಜನಾ ವರದಿಗಳು
ಗೋದಾವರಿ-ಕಾವೇರಿ ಲಿಂಕ್ ಯೋಜನೆಗೆ ಪರ್ಯಾಯವಾಗಿ ಗೋದಾವರಿ-ಕೃಷ್ಣಾ, ಕೃಷ್ಣಾ-ಪೆನ್ನಾರ್ ಹಾಗೂ ಪೆನ್ನಾರ್-ಕಾವೇರಿ ಲಿಂಕ್ ಯೋಜನೆಗಳ ಬಗ್ಗೆಯೂ ಕರಡು ಯೋಜನಾ ವರದಿಯನ್ನು ಜಲ ಅಭಿವೃದ್ಧಿ ಸಂಸ್ಥೆ ತಯಾರಿಸಿದೆ. ಈ ವರದಿಗಳನ್ನು ಮಾರ್ಚ್ 2019ರಲ್ಲಿಯೇ ಸಂಬಂಧಿಸಿದ ರಾಜ್ಯಗಳಿಗೆ ಪರಿಶೀಲನೆಗಾಗಿ ನೀಡಲಾಗಿತ್ತು. ನಂತರ ಈ ಕುರಿತಾಗಿ ಸೆಪ್ಟೆಂಬರ್ 2020ರಲ್ಲಿ ಅಂತಾರಾಜ್ಯ ಸಭೆ ನಡೆದಿದ್ದು, ಸಭೆಯಲ್ಲಿ ಕೇಳಿಬಂದ ಸಲಹೆ, ಆಕ್ಷೇಪಣೆಗಳಿಗನುಸಾರವಾಗಿ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ. ಕೃಷಿ ನೀರಾವರಿಗಾಗಿ ಮಾತ್ರವಲ್ಲದೆ, ಭವಿಷ್ಯದಲ್ಲಿ ಅಂದರೆ 2050ನೇ ಇಸ್ವಿಯವರೆಗೆ ನಗರಗಳು ಹಾಗೂ ಕೈಗಾರಿಕೆಗಳಿಗೆ ಬೇಕಾಗಬಹುದಾದ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ತಯಾರಿಸಲಾಗಿದೆ.
ಇಂಚಂಪಲ್ಲಿಯಲ್ಲಿ ಲಭ್ಯ 175 ಟಿಎಂಸಿ ಹೆಚ್ಚುವರಿ ನೀರು
ಶ್ರೀರಾಮ ಸಾಗರ ಮತ್ತು ಇಂಚಂಪಲ್ಲಿ ಮಧ್ಯೆ 175 ಟಿಎಂಸಿ ನೀರು ಹೆಚ್ಚುವರಿಯಾಗಿ ಲಭ್ಯವಿರುವುದು ಅಧ್ಯಯನದ ಮೂಲಕ ತಿಳಿದು ಬಂದಿದೆ ಎಂದು ಸಂಸ್ಥೆಯು 2018ರಲ್ಲಿ ಹೇಳಿತ್ತು. 1989ರ ಅಧ್ಯಯನದಲ್ಲಿ 713.22 ಟಿಎಂಸಿ ಹಾಗೂ 1990ರ ಅಧ್ಯಯನದಲ್ಲಿ 526.9 ಟಿಎಂಸಿ ನೀರು ಹೆಚ್ಚುವರಿಯಾಗಿರುವುದು ಕಂಡು ಬಂದಿತ್ತು. ಆದರೆ ತೆಲಂಗಾಣ ಸರ್ಕಾರವು ಇಂದ್ರಾವತಿ ನದಿ ಯೋಜನೆಯ ಮೂಲಕ ನೀರು ಎತ್ತುವಳಿ ಮಾಡುತ್ತಿರುವುದರಿಂದ ನೀರಿನ ಲಭ್ಯತೆ ಹಿಂದಿಗಿಂತ ಕಡಿಮೆಯಾಗಿರುವುದು ಕಂಡು ಬಂದಿದೆ. ಗೋದಾವರಿ ನದಿ ಪಾತ್ರದಲ್ಲಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಹಲವಾರು ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದನ್ನು ಜಲ ಅಭಿವೃದ್ಧಿ ಸಂಸ್ಥೆ ಗುರುತಿಸಿದೆ.
ಬಗೆಹರಿಯಲಿವೆ ಅಂತಾರಾಜ್ಯ ನೀರಿನ ವ್ಯಾಜ್ಯಗಳು
ಗೋದಾವರಿಯ ಒಟ್ಟು ಒಳಹರಿವಿನ ಶೇ 75ರ ಮೇಲ್ಪಟ್ಟು ನೀರಿನ ಪೈಕಿ ಶೇ 65ರಷ್ಟನ್ನು ಬಳಸಿಕೊಳ್ಳುವುದು, ಇಂದ್ರಾವತಿ ಉಪ ಯೋಜನೆಯಡಿ ಬಳಕೆಯಾಗಿ ಉಳಿದ ನೀರನ್ನು ತಿರುಗಿಸುವುದು ಮತ್ತು ಹಂತ ಹಂತವಾಗಿ ಮಹಾನದಿಯಿಂದ ಗೋದಾವರಿಗೆ ನೀರು ಹರಿಸುವುದು ಇವು ಜಲ ಸಂಸ್ಥೆ ಪ್ರಸ್ತಾವಿಸಿದ ಪರ್ಯಾಯ ಯೋಜನೆಗಳಾಗಿವೆ. ಮೊದಲ ಹಂತದಲ್ಲಿ ಗೋದಾವರಿಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಬಳಸುವುದು, ಎರಡನೇ ಹಂತದಲ್ಲಿ ಮಹಾನದಿಯಿಂದ ನೀರು ತಿರುಗಿಸುವುದು ಹಾಗೂ ಆ ಮೂಲಕ ಆಂಧ್ರ ಮತ್ತು ತೆಲಂಗಾಣದ ನೀರಿನ ಬೇಡಿಕೆಯನ್ನು ಪೂರೈಸುವುದು ಪ್ರಸ್ತಾವನೆಯಲ್ಲಿವೆ. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ನೀರಿನ ವ್ಯಾಜ್ಯಗಳನ್ನು ಬಗೆಹರಿಸುವುದು ಗೋದಾವರಿ-ಕಾವೇರಿ ಲಿಂಕ್ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯಡಿ ತಮಗೂ ನೀರಿನ ಪಾಲು ಬೇಕೆಂದು ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಬೇಡಿಕೆ ಇಟ್ಟಿವೆ. ಬರುವ ಸಭೆಯಲ್ಲಿ ಈ ವಿಷಯವೂ ಚರ್ಚೆಗೆ ಬರುವ ಸಾಧ್ಯತೆಯಿದೆ.
ನದಿಜೋಡಣೆ ಯೋಜನೆಗೆ ವೇಗ
"ಸಂಬಂಧಿಸಿದ ರಾಜ್ಯಗಳೊಂದಿಗೆ ಚರ್ಚಿಸಿ ನದಿ ಜೋಡಣೆ ಯೋಜನೆಯನ್ನು ವೇಗವಾಗಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಕೆನ್ ಬೇಟ್ವಾ ನದಿಜೋಡಣೆ ಯೋಜನೆಯನ್ನು ಈಗಾಗಲೇ ಅಂತಿಮಗೊಳಿಸಿದ್ದೇವೆ. ಈ ಕುರಿತು ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಎರಡೂ ರಾಜ್ಯಗಳ ಮಧ್ಯೆ ಒಡಂಬಡಿಕೆಗೆ ಸಹಿ ಹಾಕಲಾಗುವುದು. ಇದಾದ ನಂತರ ಗೋದಾವರಿ-ಕಾವೇರಿ ಲಿಂಕ್ ಯೋಜನೆಯ ಕುರಿತಾಗಿ ಆಂಧ್ರ, ತೆಲಂಗಾಣ ಹಾಗೂ ಇತರೆ ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದೇವೆ. ಎರಡು ತೆಲುಗು ರಾಜ್ಯ ಹಾಗೂ ತಮಿಳುನಾಡಿಗೆ ಉಪಯುಕ್ತವಾಗುವ ಈ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರವು ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಖಂಡಿತವಾಗಿಯೂ ಈ ಯೋಜನೆಗಳನ್ನು ನಾವು ಸಕಾರಾತ್ಮಕವಾಗಿ ಮುಂದುವರಿಸಲಿದ್ದೇವೆ." ಎಂದು ವೇದಿರೆ ಶ್ರೀರಾಮ ಹೇಳಿದರು.
ಸಮಾನ ನೀರು ಹಂಚಿಕೆಗೆ ಸೂತ್ರ
ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಗೋದಾವರಿ ಪಾತ್ರದ ನೀರನ್ನು ಕೃಷ್ಣಾ ನದಿಗೆ ತಿರುಗಿಸುತ್ತಿರುವುದನ್ನು ಹೊಸ ಪ್ರಸ್ತಾವನೆಯಲ್ಲಿ ಗುರುತಿಸಲಾಗಿದೆ. ಹೀಗಾಗಿ ಈ ಎರಡೂ ನದಿ ಪಾತ್ರಗಳನ್ನು ಸಹ ಕೇಂದ್ರದ ಪ್ರಸ್ತಾವಿತ ನದಿ ಜೋಡಣೆಯಲ್ಲಿ ಸೇರಿಸಿದರೆ ಸಂಬಂಧಿಸಿದ ಎಲ್ಲ ರಾಜ್ಯಗಳಿಗೂ ಸಮಾನ ಲಾಭ ದೊರಕಲಿದೆ ಎನ್ನಲಾಗಿದೆ. ಏನೇ ಆದರೂ ಇಂಚಂಪಲ್ಲಿಯಿಂದ ನೀರು ತಿರುಗಿಸುವಿಕೆಯ ಕುರಿತಾಗಿ ಬರುವ ಫೆ.25 ರ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ತಿಳಿದು ಬಂದಿದೆ. ಜನಮ್ ಪೇಟ್ನಿಂದ 247 ಟಿಎಂಸಿ ಹೆಚ್ಚುವರಿ ನೀರನ್ನು ತಿರುಗಿಸುವ ಪರ್ಯಾಯ ಯೋಜನೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎನ್ನಲಾಗಿದೆ.