ಉಜ್ಜಯಿನಿ (ಮಧ್ಯಪ್ರದೇಶ): ಮಹಾಕಾಲ್ ದೇವಸ್ಥಾನದ ಶಿವಲಿಂಗದ ಬಳಿ ಮತ್ತು ಆವರಣದಲ್ಲಿ ಕೆಲ ಹುಡುಗಿಯರು ಸಿನಿಮಾ ಹಾಡುಗಳಿಗೆ ರೀಲ್ಸ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಎರಡು ವಿಭಿನ್ನ ಖಾತೆಗಳಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ.
ವಿಡಿಯೋದಲ್ಲಿ ಓರ್ವ ಯುವತಿ ಮಹಾಕಾಲ್ ದೇವಾಲಯದ ಆವರಣದಲ್ಲಿ ಸುತ್ತಾಡುತ್ತ ಸಿನಿಮಾ ಹಾಡಿಗೆ ರೀಲ್ಸ್ ಮಾಡುತ್ತಿರುವುದು ಕಂಡುಬರುತ್ತದೆ. ಮತ್ತೊಬ್ಬ ಯುವತಿ ಮಹಾಕಾಲ್ ದೇವಾಲಯದ ಗರ್ಭಗುಡಿಯಲ್ಲಿ ಡೈಲಾಗ್‌ಗಳೊಂದಿಗೆ ಸಿನಿಮಾ ಹಾಡಿಗೆ ರೀಲ್ಸ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ವೈರಲ್ ಆದ ನಂತರ, ಮಹಾಕಾಲ್ ದೇವಸ್ಥಾನದ ಅರ್ಚಕರು ಹುಡುಗಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ವಿಡಿಯೋಗಳು ಸನಾತನ ಸಂಪ್ರದಾಯಕ್ಕೆ ವಿರುದ್ಧವೆಂದು ಅರ್ಚಕರು ಹೇಳಿದ್ದಾರೆ. ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಕೂಡ ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ನಾವ್ಯಾರಿಗೂ ಕಮ್ಮಿ ಇಲ್ಲ.. ಈ ಸ್ವಾಮೀಜಿಗಳ ರೀಲ್ಸ್ಗೆ ಭಕ್ತರು ಫಿದಾ!
ಮಹಾಕಾಲ್ ದೇವಸ್ಥಾನದಲ್ಲಿ ನೂರಾರು ನೌಕರರು ದೇವಸ್ಥಾನದ ಭದ್ರತೆಗಾಗಿ ಇರುತ್ತಾರೆ. ಹೀಗಿದ್ದರೂ ಭಕ್ತರು ದೇವಸ್ಥಾನದ ಆವರಣ ಮತ್ತು ಗರ್ಭಗುಡಿಯವರೆಗೂ ಹೋಗಿ, ವಿಡಿಯೋಗಳನ್ನು ಮಾಡುತ್ತಿದ್ದಾರೆ ಎಂದರೇ, ಅವರು ಎಷ್ಟು ಬೇಜಾವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ ಎಂಬ ಮಾತುಗಳು ಕೇಳಿಬಂದಿವೆ.