ಮಲಪ್ಪುರಂ (ಕೇರಳ): ಮಲಪ್ಪುರಂನಲ್ಲಿ ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕಾಗಿ ಯುವತಿಯೋರ್ವಳನ್ನು ದುಷ್ಕರ್ಮಿಯೊಬ್ಬ ಚಾಕುವಿನಿಂದ ಅತ್ಯಂತ ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾನೆ.
ಆರೋಪಿ ವಿನೀಶ್ ಸಂತ್ರಸ್ತೆ ದೃಶ್ಯಳನ್ನು ಘನಘೋರವಾಗಿ ಕೊಂದಿರುವ ಆಘಾತಕಾರಿ ಸಂಗತಿ ಮೃತದೇಹದ ಮರಣೋತ್ತರ ವರದಿಯಲ್ಲಿ ಬೆಳಕಿಗೆ ಬಂದಿದೆ.
ದೃಶ್ಯಳ ಎದೆಗೆ ಚಾಕುವಿನಿಂದ ನಾಲ್ಕು ಬಾರಿ ಮತ್ತು ಹೊಟ್ಟೆಗೆ ಮೂರು ಬಾರಿ ಇರಿದಿದ್ದಾನೆ. ದೇಹದ ವಿವಿಧ ಭಾಗಗಳಲ್ಲಿ 15 ಬಾರಿ ಇರಿದಿರುವ ಗಾಯದ ಗುರುತುಗಳಿವೆ. ಈ ದಾಳಿಯನ್ನು ತಡೆಯಲು ಪ್ರಯತ್ನಿಸಿದ ಆಕೆಯ ಸಹೋದರಿಯೂ ಗಾಯಗೊಂಡಿದ್ದಾಳೆ.
ದೃಶ್ಯಳ ತಂದೆಯ ಒಡೆತನದ ಅಂಗಡಿಗೆ ಬೆಂಕಿ ಹಚ್ಚಿರುವ ವಿನೀಶ್, 15 ಕಿ.ಮೀ ದೂರ ನಡೆದುಕೊಂಡು ಹೋಗಿ ಯುವತಿಯ ಮನೆ ತಲುಪಿದ್ದಾನೆ. ಮುಂಜಾನೆಯ ತನಕ ಮನೆಯ ಬಳಿಯೇ ಅಡಗಿಕೊಂಡಿದ್ದು, ಯಾರೂ ಇಲ್ಲದ ವೇಳೆ ದೃಶ್ಯಳ ಕೋಣೆಗೆ ಅಕ್ರಮವಾಗಿ ಪ್ರವೇಶಿಸಿ ಕ್ರೂರವಾಗಿ ಕೊಂದು ಹಾಕಿದ್ದಾನೆ.
ಏಪ್ರಿಲ್‌ನಲ್ಲಿ ಈ ಯುವತಿಯ ಕುಟುಂಬವು ವಿನೀಶ್ ವಿರುದ್ಧ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಕ್ಕಾಗಿ ಪೊಲೀಸರಿಗೆ ದೂರು ನೀಡಿತ್ತು.