ಗುಂಟೂರು : ಮಗಳ ಪ್ರೀತಿ ಒಪ್ಪದ ತಂದೆ ಆಕೆಯ ಪ್ರಿಯತಮನ ಕೈಗಳನ್ನು ಕಟ್ ಮಾಡಿ ಬರ್ಬರವಾಗಿ ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಪ್ಪರಾವೂರಿನಲ್ಲಿ ನಡೆದಿದೆ.
ಗ್ರಾಮದ ವೆಂಕಟೇಶ್ ಎಂಬ ಯುವಕ ಕೊಲೆಯಾದ ದುರ್ದೈವಿ. ಈತ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಆ ಯುವತಿ ಸಹ ವೆಂಕಟೇಶ್‌ನನ್ನು ಮನಸಾರೆ ಪ್ರೀತಿಸಿದ್ದಳು. ತಾವಿಬ್ಬರೂ ಮದುವೆ ಮಾಡಿಕೊಳ್ಳುವುದಾಗಿ ತಮ್ಮ ತಮ್ಮ ಮನೆಯವರಿಗೆ ತಿಳಿಸಿದ್ದಾರೆ.
ವಿಷಯ ತಿಳಿದ ಯುವತಿ ತಂದೆ, ಇವರಿಬ್ಬರ ಮದುವೆಗೆ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ಈ ವಿಷಯದ ಬಗ್ಗೆ ಗ್ರಾಮದಲ್ಲಿ ಪಂಚಾಯತಿ ಕೂಡ ನಡೆಸಿದ್ದಾರೆ.
ಪಂಚಾಯ್ತಿಯಲ್ಲಿ ಸ್ವಲ್ಪ ಸಮಯದವರೆಗೆ ಯುವತಿಯಿಂದ ದೂರವಿರುವಂತೆ ವೆಂಕಟೇಶ್ಗೆ ತಿಳಿ ಹೇಳಿದ್ದಾರೆ. ಅದರಂತೆ ವೆಂಕಟೇಶ್ ಯುವತಿಯಿಂದ ದೂರವಿದ್ದನಂತೆ.
ಯುವತಿಯಿಂದ ದೂರವಿದ್ರೂ ವೆಂಕಟೇಶ್ ಪ್ರತಿನಿತ್ಯ ಫೋನ್ ಮಾಡಿ ಮಾತನಾಡುತ್ತಿದ್ದನು. ಈ ವಿಷಯ ಯುವತಿ ತಂದೆಗೆ ತಿಳಿದಿದೆ. ಕಳೆದ ರಾತ್ರಿ ವೆಂಕಟೇಶ್ಗೆ ಫೋನ್ ಮಾಡಿ ಯುವತಿ ತಂದೆ ಕರೆಸಿಕೊಂಡಿದ್ದಾನೆ. ಬಳಿಕ ಆತನ ಮೇಲೆ ಹರಿತವಾದ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ವೆಂಕಟೇಶ್‌ನ ಎರಡು ಕೈಗಳನ್ನು ಕಟ್ ಮಾಡಿದ್ದಾನೆ. ಅಷ್ಟೇ ಅಲ್ಲ, ಆತನ ಕಾಲುಗಳನ್ನು ಕಟ್ ಮಾಡಲು ಯತ್ನಿಸಿದ್ದಾನೆ. ಆದ್ರೆ, ಸಾಧ್ಯವಾಗದೇ ಇದ್ದಾಗ ಯುವತಿ ತಂದೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಈ ಸುದ್ದಿ ಪೊಲೀಸರಿಗೆ ತಿಳಿದಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿ ವೆಂಕೆಟೇಶ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಿಸದೇ ವೆಂಕಟೇಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.