ಧೋಲ್ಪುರ್ (ರಾಜಸ್ಥಾನ): ಫೇಸ್ಬುಕ್ನಲ್ಲಿ ಎರಡು ಎಳೆ ಮನಸ್ಸುಗಳ ನಡುವೆ ಆರಂಭವಾದ ಸಂಭಾಷಣೆ ಸಪ್ತಪದಿ ತುಳಿಯುವ ಮಾತಿನ ವರೆಗೂ ಬಂದು ನಿಂತಿತ್ತು. ಆಗ್ರಾದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಅಪ್ರಾಪ್ತ ಪ್ರಿಯತಮನನ್ನು ವರಿಸಲು ಮನೆ ಬಿಟ್ಟು ಧೋಲ್‌ಪುರಕ್ಕೆ ಬಂದಳು. ಆದರೆ ಆ ಒಂದೇ ಒಂದು ವಿಚಾರ ಚಿಗುರೊಡೆದ ಪ್ರೇಮವನ್ನು ಚಿವುಟಿ ಹಾಕುವಂತೆ ಮಾಡಿತು.
ಬಾಲಕಿ ಆಗ್ರಾದ ನಿವಾಸಿ. ಬಾಲಕ ಧೋಲ್ಪುರ್ ನಿವಾಸಿ. ಅಪ್ರಾಪ್ತರಾದ ಇಬ್ಬರೂ ಪರಸ್ಪರ ಇಷ್ಟಪಟ್ಟು, ಮದುವೆಯಾಗಲು ಬಯಸಿದ್ದರು. ಇದಕ್ಕಾಗಿ ಹುಡುಗಿ ಆಗ್ರಾದಿಂದ ಧೋಲ್ಪುರ್ಗೆ ಬಂದಿದ್ದಾಳೆ. ತನ್ನ ಕನಸಿನ ಹುಡುಗನನ್ನು ವರಿಸಿ ಜೀವನ ಕಟ್ಟಿಕೊಳ್ಳುವ ಬಯಕೆಯಲ್ಲಿದ್ದಳು. ಇದೇ ಸಂದರ್ಭದಲ್ಲಿ ಆಕೆ ತನ್ನ ಇನಿಯನ ಸಂಬಳದ ಬಗ್ಗೆ ಉತ್ಸುಕಳಾಗಿದ್ದು, ಆತನ ಆದಾಯದ ಬಗ್ಗೆ ವಿಚಾರಿಸಿದ್ದಾಳೆ. ಆಗ ಬಾಲಕನ ಸಂಬಳ 1,400 ರೂ. ಎಂದು ತಿಳಿದಿದೆ. ಇದರಿಂದ ಬೇಸರಗೊಂಡ ಬಾಲೆ ಮದುವೆಯಾಗಲು ನಿರಾಕರಿಸಿದ್ದಾಳೆ.
ಧೋಲ್ಪುರ್ ರೈಲ್ವೆ ನಿಲ್ದಾಣದಲ್ಲಿ ಅಪ್ರಾಪ್ತ ವಯಸ್ಕರನ್ನು ನೋಡಿದ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಗಿರೀಶ್ ಗುರ್ಜಾರ್ ಮತ್ತು ಬ್ರಿಜೇಶ್ ಮುಖಾರಿಯಾ ಅವರಿಬ್ಬರ ನಡವಳಿಕೆ ಕಂಡು ಅನುಮಾನಗೊಂಡಿದ್ದಾರೆ. ಬಳಿಕ ಅವರ ಬಗ್ಗೆ ವಿಚಾರಿಸಿದಾಗ ವಾಸ್ತವ ತಿಳಿದಿದೆ. ಅಲ್ಲಿಂದ ಬಾಲಕನನ್ನು ಅಂಬೇಡ್ಕರ್ ಹಾಸ್ಟೆಲ್ ಕೋವಿಡ್ ಸೆಂಟರ್ಗೆ ಕಳುಹಿಸಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯರ ಪ್ರಕಾರ, ಮಗುವಿನ ಸಂಬಳ 1,400 ರೂ. ತಿಳಿದ ನಂತರ ಹುಡುಗಿ ಹುಡುಗನೊಂದಿಗೆ ಹೋಗಲು ನಿರಾಕರಿಸಿದಳು. ಅದೇ ಸಮಯದಲ್ಲಿ, ಬಾಲಕಿ ತಮ್ಮ ತಂದೆಯ ಮನೆಗೆ ಹೋಗದಿರಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಅವರ ತಂದೆ ಮದ್ಯಪಾನ ಮಾಡಿ ಆಕೆಯನ್ನು ಹೊಡೆಯುತ್ತಾರಂತೆ. ಬಾಲಕಿಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ, ಆಕೆಯನ್ನು ಧೋಲ್ಪುರ್ಗೆ ಬರುವಂತೆ ತಿಳಿಸಲಾಗಿದೆ. ಕುಟುಂಬ ಸದಸ್ಯರ ಆಗಮನದ ನಂತರ, ಹೆಣ್ಣು ಮಗುವಿನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.