ಜಮ್ಮು: ತಮ್ಮ ಪಾಸ್‌ಪೋರ್ಟ್ ನವೀಕರಣ ಮಾಡಿಸಲು ಸಹಾಯ ಮಾಡುವಂತೆ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಸೋಮವಾರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಕೋರಿದ್ದಾರೆ. ತಮ್ಮ 80 ವರ್ಷದ ತಾಯಿಯನ್ನು ಮೆಕ್ಕಾಗೆ ತೀರ್ಥಯಾತ್ರೆಗೆ ಕರೆದೊಯ್ಯಲು ಕಳೆದ ಮೂರು ವರ್ಷಗಳಿಂದ ಕಾಯುತ್ತಿದ್ದೇನೆ ಎಂದು ಮೆಹಬೂಬಾ ಹೇಳಿದ್ದಾರೆ. ತನಗೆ ಪಾಸ್‌ಪೋರ್ಟ್ ನೀಡುವುದರಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಸಿಐಡಿ ವ್ಯತಿರಿಕ್ತ ವರದಿ ನೀಡಿದ್ದರಿಂದ ತನ್ನ ಪಾಸ್‌ಪೋರ್ಟ್ ನವೀಕರಣ ಆಗುತ್ತಿಲ್ಲ ಎಂದು ಸಚಿವರಿಗೆ ಬರೆದ ಪತ್ರದಲ್ಲಿ ಅವರು ತಿಳಿಸಿದ್ದಾರೆ.
ವಿದೇಶದಲ್ಲಿ ಶಿಕ್ಷಣಕ್ಕೆ ಹೋಗಲು ಬಯಸಿದ್ದ ತಮ್ಮ ಮಗಳು ಇಲ್ತಿಜಾ ಅವರಿಗೆ ಕೂಡ ಪಾಸ್‌ಪೋರ್ಟ್ ನೀಡುವಲ್ಲಿ ವಿಳಂಬ ಮಾಡಲಾಗಿತ್ತು ಎಂದು ಮೆಹಬೂಬಾ ಎತ್ತಿ ತೋರಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಎಳೆದುಕೊಂಡು ಬರಲಾಗುತ್ತಿರುವ ವಿಷಯದ ಬಗ್ಗೆ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಹೇಳಿದ್ದಾರೆ. ನನ್ನ ತಾಯಿ (ಗುಲ್ಶನ್ ನಜೀರ್) ಮತ್ತು ನಾನು ಮಾರ್ಚ್ 2020 ರಲ್ಲಿ ಪಾಸ್‌ಪೋರ್ಟ್ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.
ನನ್ನ 80 ವರ್ಷದ ತಾಯಿ ಮತ್ತು ನನಗೆ ಪಾಸ್‌ಪೋರ್ಟ್ ನೀಡುವುದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಸಿಐಡಿ ಪ್ರತಿಕೂಲ ವರದಿ ನೀಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ಭದ್ರತೆ ವಿಷಯವನ್ನು ನೆಪವಾಗಿಟ್ಟುಕೊಂಡು ಪತ್ರಕರ್ತರು, ವಿದ್ಯಾರ್ಥಿಗಳು ಮತ್ತು ಇತರರು ಸೇರಿದಂತೆ ಸಾವಿರಾರು ಪಾಸ್‌ಪೋರ್ಟ್ ಅರ್ಜಿಗಳನ್ನು ಏಕಪಕ್ಷೀಯವಾಗಿ ತಿರಸ್ಕರಿಸುವುದು ರೂಢಿಯಾಗಿದೆ ಎಂದು ಮೆಹಬೂಬಾ ಮುಫ್ತಿ ತನ್ನ ಪತ್ರದಲ್ಲಿ ವಿವರಿಸಿದ್ದಾರೆ.
ಪಾಸ್‌ಪೋರ್ಟ್ ವಿಚಾರದಲ್ಲಿ ನಾನು ಹೈಕೋರ್ಟ್ ಮೊರೆ ಹೋಗಿದ್ದೆ. ಮೂರು ವರ್ಷಗಳ ಕಾಲ ವಿಚಾರಣೆ ನಡೆದ ನಂತರ ಯಾವುದೇ ಆಧಾರವಿಲ್ಲದೆ ಪಾಸ್‌ಪೋರ್ಟ್‌ಗಳನ್ನು ನಿರಾಕರಿಸುವ ಮೂಲಕ ಶ್ರೀನಗರದಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ಸಿಐಡಿಯ ಕೈಗೊಂಬೆಯಾಗಿ ಕಾರ್ಯನಿರ್ವಹಿಸಬಾರದು ಎಂದು ನ್ಯಾಯಾಲಯವು ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ.
ನನ್ನ ವಿಷಯಕ್ಕೆ ಬರುವುದಾರೆ, 2021 ರಿಂದ ಭಾರತೀಯ ಪಾಸ್‌ಪೋರ್ಟ್ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಹಲವಾರು ಬಾರಿ ನನಗೆ ಸೂಚಿಸಲಾಗಿತ್ತು. ನಾನು ಅದರಂತೆ ಅನೇಕ ಬಾರಿ ಈ ಕಚೇರಿಗೆ ಭೇಟಿ ನೀಡಿದ್ದೇನೆ. ದುರದೃಷ್ಟವಶಾತ್ ನನಗೆ ಈವರೆಗೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ನನ್ನ ಪಾಸ್‌ಪೋರ್ಟ್ ನೀಡುವಲ್ಲಿ ಅತಿಯಾದ ಮತ್ತು ಉದ್ದೇಶಪೂರ್ವಕ ವಿಳಂಬವು ನನ್ನ ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ.
ಪ್ರಜಾಪ್ರಭುತ್ವದಲ್ಲಿ ನನ್ನಂಥವಳ ಮೂಲಭೂತ ಹಕ್ಕುಗಳನ್ನು ಇಷ್ಟೊಂದು ನಿರ್ಲಜ್ಜ ಹಾಗೂ ನಿರ್ಭಯವಾಗಿ ತಿರಸ್ಕರಿಸುವಂತಾದರೆ, ಓರ್ವ ಸಾಮಾನ್ಯ ಕಶ್ಮೀರಿ ಪ್ರಜೆಯ ಪಾಡೇನು ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನನ್ನ ಮಗಳು ಇಲ್ತಿಜಾ ತನ್ನ ಪಾಸ್‌ಪೋರ್ಟ್ ನವೀಕರಣಕ್ಕಾಗಿ ಜೂನ್ 2022 ರಲ್ಲಿ ಅರ್ಜಿ ಸಲ್ಲಿಸಿದ್ದಳು. ಆಕೆಯ ಅರ್ಜಿಯೂ ಮುಂದೆ ಹೋಗಿಲ್ಲ. ಶ್ರೀನಗರದಲ್ಲಿರುವ ಪಾಸ್‌ಪೋರ್ಟ್ ಕಚೇರಿಯು ತನ್ನ ಕರ್ತವ್ಯ ನಿರ್ವಹಿಸಲು ಮತ್ತೊಮ್ಮೆ ವಿಫಲವಾಗಿದೆ ಎಂದು ತೋರುತ್ತದೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ: ಮೆಹಬೂಬಾ ಮುಫ್ತಿ ತಾಯಿಗೆ ಪಾಸ್‌ಪೋರ್ಟ್ ನೀಡುವಂತೆ ಕೋರ್ಟ್ ಆದೇಶ