ಗಯಾ (ಬಿಹಾರ): ಬಿಹಾರದ ಗಯಾದಲ್ಲಿ ವಿಶ್ವವಿಖ್ಯಾತ ಪಿತೃ ಪಕ್ಷ ಜಾತ್ರೆ ನಡೆಯುತ್ತಿದೆ. ಈ ಅವಧಿಯಲ್ಲಿ ಹತ್ತಾರು ವಿದೇಶಿ ಯಾತ್ರಿಕರು ಗಯಾಗೆ ಆಗಮಿಸಿದ್ದಾರೆ. ಈ ವಿದೇಶಿಗರು ಭಾರತೀಯ ವೇಷಭೂಷಣಗಳು ಮತ್ತು ಧಾರ್ಮಿಕ ಸಂಸ್ಕೃತಿಯನ್ನು ತುಂಬಾ ಇಷ್ಟಪಡುತ್ತಾರೆ. ಗಯಾದಲ್ಲಿ ಭಾರತೀಯ ಬಟ್ಟೆ ತೊಟ್ಟ ಜರ್ಮನ್ ವಿದೇಶಿ ಮಹಿಳೆಯರು ಪಿಂಡ ದಾನ ಮಾಡಿದರು. ಜರ್ಮನಿ, ರಷ್ಯಾ, ಉಕ್ರೇನ್‌ನಿಂದಲೂ ವಿದೇಶಿಗರು ಗಯಾ ಪ್ರದೇಶಕ್ಕೆ ಬಂದು ಪಿಂಡ ದಾನ ಮಾಡಿದ್ದಾರೆ.
ಜರ್ಮನ್ ಯಾತ್ರಿಕರಿಂದ ಪಿಂಡ ದಾನ: ನಿನ್ನೆ ಬುಧವಾರ, ಗಯಾದ ಫಾಲ್ಗು ಕರಾವಳಿಯಲ್ಲಿರುವ ದೇವಘಾಟ್‌ನಲ್ಲಿ ಜರ್ಮನ್ ಯಾತ್ರಿಕರು ಪಿಂಡ ದಾನವನ್ನು ಮಾಡಿದ್ದಾರೆ. ಅವರು ತಮ್ಮ ಪೂರ್ವಜರಿಗಾಗಿ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಂಡರು. ಜರ್ಮನಿಯ 12 ಮಹಿಳೆಯರು ಮತ್ತು ಒಬ್ಬ ಪುರುಷ ಪಿಂಡ್ ದಾನ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೆಲ್ಲರೂ ತಮ್ಮ ಪೂರ್ವಿಕರಿಗಾಗಿ ಪಿಂಡ ದಾನ ಸಂಪ್ರಯವನ್ನು ಪೂರ್ಣಗೊಳಿಸಿದ್ದಾರೆ. ವಿಶೇಷವೆಂದರೆ ಇವರಲ್ಲಿ ಹೆಚ್ಚಿನವರು ಮಹಿಳೆಯರೇ ಸೇರಿದ್ದಾರೆ.
ಪಿಂಡ ದಾನ ಸಂಪ್ರದಾಯದ ಬಗ್ಗೆ ವಿದೇಶಿಗರಿಗಿದೆ ಹೆಚ್ಚು ನಂಬಿಕೆ: ರಷ್ಯಾ, ಉಕ್ರೇನ್, ಜರ್ಮನಿಯಿಂದ ಹತ್ತಾರು ಯಾತ್ರಿಕರು ಪಿಂಡ ದಾನಕ್ಕಾಗಿ ಗಯಾ ಜಿ ತಲುಪಿದ್ದಾರೆ. ಇವರಿಂದ ಗುರುವಾರವೂ ಪಿಂಡ ದಾನ ವಿಧಿ ವಿಧಾನ ನಡೆಯಲಿದೆ. ನಿನ್ನೆ (ಬುಧವಾರ) ಜರ್ಮನ್ ದೇಶದ ಹತ್ತಾರು ಜನರು ಪಿಂಡ ದಾನ ಧಾರ್ಮಿಕ ಸಂಪ್ರದಾಯವನ್ನು ನೆರವೇರಿಸಿದರು. ಇತ್ತೀಚಿನ ದಿನಗಳಲ್ಲಿ ವಿದೇಶಿಗರಿಗೆ ಪಿಂಡ ದಾನ ಸಂಪ್ರದಾಯದ ಮೇಲೆ ನಂಬಿಕೆ ಹೆಚ್ಚಿದೆ. ಇದೇ ಕಾರಣಕ್ಕಾಗಿಯೇ ವಿದೇಶಿ ಯಾತ್ರಾರ್ಥಿಗಳು ಗಯಾ ಪ್ರದೇಶಕ್ಕೆ ಪಿಂಡ ದಾನ ಮಾಡಲು ಬರುತ್ತಿದ್ದಾರೆ. ತಮ್ಮ ಪೂರ್ವಜರಿಗೆ ಮೋಕ್ಷ ಪ್ರಾಪ್ತಿಯಾಗಲಿ ಎಂಬ ಆಶಯದೊಂದಿಗೆ ಗಯಾ ತಲುಪಿದ ಈ ವಿದೇಶಿಯರಿಗೆ ಸನಾತನ ಧರ್ಮದ ಮೇಲಿನ ನಂಬಿಕೆಯು ಹೆಚ್ಚಾಗಿದೆ.
"ಜರ್ಮನಿಯಿಂದ ಅಬುಧಾಬಿಗೆ ಬಂದು ದೆಹಲಿಗೆ ಬಂದೆ. ದೆಹಲಿಯಿಂದ ವಾರಣಾಸಿ, ನಂತರ ಅಲ್ಲಿಂದ ಗಯಾ ಪ್ರದೇಶಕ್ಕೆ ಬಂದು ತಲುಪಿದ್ದೇನೆ. ಪಿಂಡ ದಾನ ಮಾಡುವ ಧಾರ್ಮಿಕ ಆಚರಣೆ ಚೆನ್ನಾಗಿತ್ತು. ಇಲ್ಲಿನ ಧಾರ್ಮಿಕ ಸಂಸ್ಕೃತಿಯು ನಮಗೆ ತುಂಬಾ ಸ್ಪೂರ್ತಿ ಲಭಿಸಿದೆ. ಇಲ್ಲಿಗೆ ಬಂದ ಮೇಲೆ ನಮಗೆ ತುಂಬಾ ನೆಮ್ಮದಿ ಸಿಕ್ಕಿದೆ" ಎಂದು ವಿದೇಶಿ ಮಹಿಳೆ ಯೂಲಿಯಾ ತಿಳಿಸಿದ್ದಾರೆ.
ವಿದೇಶಿ ವಿದ್ವಾಂಸರಿಂದ ಸಂಶೋಧನೆ: ಗಯಾಯಲ್ಲಿ ನಡೆಯುವ ಪಿಂಡ ದಾನ ಧಾರ್ಮಿಕ ವಿಧಿ ವಿಧಾನದ ಬಗ್ಗೆ ವಿದೇಶಿಯರಿಂದ ಸಂಶೋಧನೆಗಳು ಕೂಡ ನಡೆದಿವೆ. ಇದರ ಜೊತೆಗೆ ವಿದೇಶಿಗರ ಆಗಮನ ಮತ್ತು ಅವರ ಪಿಂಡ ದಾನದ ಮೇಲಿನ ನಂಬಿಕೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ವಿದೇಶಿ ಮಹಿಳೆಯರಲ್ಲಿ ಪಿಂಡ ದಾನದ ಬಗ್ಗೆ ಹೆಚ್ಚು ನಂಬಿಕೆಯಿದೆ. ಜರ್ಮನ್ ಮಹಿಳೆಯರು ಗಯಾ ತಲುಪಿ ಪಿಂಡ ದಾನದ ಆಚರಣೆಯನ್ನು ಮಾಡುತ್ತಿದ್ದಾರೆ. ಇವರೆಲ್ಲರೂ ಜರ್ಮನಿ ಮೂಲದವರಾಗಿದ್ದು, ಇದಲ್ಲದೇ ರಷ್ಯಾ, ಉಕ್ರೇನ್ ನಿಂದಲೂ ವಿದೇಶಿ ಮಹಿಳೆಯರು ಗಯಾ ಪ್ರದೇಶಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಪಿಂಡ ದಾನ ಮಾಡಲಿದ್ದಾರೆ ಎಂದು ಇಸ್ಕಾನ್ ಬೋಧಕ ಲೋಕನಾಥ್ ಗೌರ್ ಹೇಳಿದ್ದಾರೆ.
'' ಪೂರ್ವಜರ ಮೋಕ್ಷ ಬೇಕು ಎನ್ನುವ ಹಂಬಲದಿಂದ ವಿದೇಶಿ ಮಹಿಳೆಯರಲ್ಲಿ ಪಿಂಡ ದಾನ ಸಂಪ್ರದಾಯದ ಮೇಲಿನ ನಂಬಿಕೆ ಹೆಚ್ಚಾಗಿದೆ. ಇದರಿಂದಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಗಯಾಗೆ ಮಹಿಳೆಯರು ಆಗಮಿಸುತ್ತಿದ್ದಾರೆ. ಪ್ರಸ್ತುತ ಮೂರು ದೇಶಗಳಿಂದ ವಿದೇಶಿಗರು ಆಗಮಿಸಿದ್ದು, ಅವರಲ್ಲಿ ಜರ್ಮನಿಯ ಯಾತ್ರಿಕರು ಪಿಂಡ ದಾನ ವಿಧಿ ವಿಧಾನ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ವಿದೇಶಿಯರಾದ ಸ್ವೆಟ್ಲಾನಾ, ಐರಿನಾ, ಕೆವಿನ್, ನಟಾಲಿವ್, ಮರೀನಾ, ಮಾರ್ಗರೆಟಾ, ವ್ಯಾಲೆಂಟಿನಾ ಅವರು ಭಾಗವಹಿಸಿದ್ದಾರೆ" ಎಂದು ಇಸ್ಕಾನ್ ಬೋಧಕ ಲೋಕನಾಥ್ ಗೌರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೇರಳದ ಸಾಕ್ಷರತಾ 'ರಾಯಭಾರಿ', ಶತಾಯುಷಿ ಕಾರ್ತ್ಯಾಯನಿ ಅಮ್ಮ ಇನ್ನಿಲ್ಲ