ಆಗ್ರಾ(ಉತ್ತರ ಪ್ರದೇಶ): ಯುವತಿಯೋರ್ವಳು ಜಮೀನಿನಿಂದ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಆಕೆಯನ್ನು ಅಪಹರಿಸಿ, ಬಳಿಕ ಮತ್ತು ಬರುವ ಔಷಧಿ ನೀಡಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಬರ್ಹಾನ್ ಕ್ಷೇತ್ರದ ಗ್ರಾಮವೊಂದರಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಆರೋಪಿಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಯುವತಿ ವಾಸವಾಗಿದ್ದ ಗ್ರಾಮದ ಕಾಮುಕರಿಬ್ಬರು ಈ ದುಷ್ಕೃತ್ಯವೆಸಗಿದ್ದಾರೆಂದು ಹೇಳಲಾಗುತ್ತಿದೆ. ಆಕೆಗೆ ಮತ್ತು ಬರುವ ಔಷಧಿ ನೀಡಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಇಂದು ಬೆಳಗ್ಗೆ ಯುವತಿಯನ್ನ ಗ್ರಾಮದ ಹೊರವಲಯದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ತನ್ನ ಕುಟುಂಬದ ಸದಸ್ಯರೊಂದಿಗೆ ಜಮೀನಿಗೆ ತೆರಳಿದ್ದ ಯುವತಿ ಸೋಮವಾರ ಮಧ್ಯಾಹ್ನ ವಾಪಸ್ ಮನೆಗೆ ಬರುತ್ತಿದ್ದಳು. ಈ ವೇಳೆ ಗ್ರಾಮದ ಇಬ್ಬರು ದ್ವಿಚಕ್ರವಾಹನದಲ್ಲಿ ಬಂದು ಆಕೆಯನ್ನ ಕಿಡ್ನಾಪ್ ಮಾಡಿದ್ದು, ಈ ವೇಳೆ ದುಷ್ಕೃತ್ಯವೆಸಗಿದ್ದಾರೆ.
ಇದನ್ನೂ ಓದಿರಿ: ರಸ್ತೆ ತಿರುವಿನಲ್ಲಿ ಮಹಿಳೆ ಮೇಲೆ ಹರಿದ ಬಸ್: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ರಾತ್ರಿಯಾದರೂ ಯುವತಿ ಮನೆಗೆ ಬಾರದ ಕಾರಣ, ನಾಪತ್ತೆಯಾಗಿರುವ ಬಗ್ಗೆ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ವೇಳೆ ಪೊಲೀಸ್ ಅಧಿಕಾರಿ ರವಿಕುಮಾರ್ ಕೂಡ ಗ್ರಾಮಕ್ಕೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಬೆಳಗ್ಗೆ ಆಕೆಯನ್ನ ಗ್ರಾಮದ ಹೊರವಲಯದಲ್ಲಿ ಬಿಟ್ಟು ಹೋಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಕೆಯ ಹೇಳಿಕೆ ಸಹ ಪಡೆದುಕೊಳ್ಳಲಾಗಿದೆ.
ಘಟನೆ ಬೆನ್ನಲ್ಲೇ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ. ಯುವತಿಯನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ಖಚಿತಗೊಂಡಿದೆ. ಇನ್ನು ಆರೋಪಿಗಳನ್ನ ಆದಷ್ಟು ಬೇಗ ಬಂಧನ ಮಾಡಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.