ಹೈದರಾಬಾದ್: ಕಾರಿನ ಬಾಡಿಗೆ ಹಣ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಚಾಲಕನ ಮೇಲೆ ಕ್ರಿಕೆಟ್ ಬ್ಯಾಟ್, ಹಾಕಿ ಸ್ಟಿಕ್ಗಳಿಂದ ಮಾರಣಾಂತಿಕ ಹಲ್ಲೆ ಮಾಡಿಸಿದ ಘಟನೆ ತೆಲಂಗಾಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ನಾರಾಯಣಖೇಡ್ನ ವೆಂಕಟೇಶ್(27) ಗಂಭೀರ ಗಾಯಗೊಂಡ ಚಾಲಕ. ಉಪ್ಪರ್ಪಲ್ಲಿಯ ವಿವೇಕ್ ರೆಡ್ಡಿ (26) ಹಲ್ಲೆ ಮಾಡಿದ ಆರೋಪಿ.
ಜುಲೈ 31 ರಂದು ಈ ಘಟನೆ ನಡೆದಿದ. ವಿವೇಖ್ರೆಡ್ಡಿ ಮನೆಗೆ ತೆರಳಲು ಕಾರು ಬುಕ್ ಮಾಡಿದ್ದ. ನಿಗದಿತ ಸ್ಥಳ ತಲುಪಿದ ಬಳಿಕ 600 ರೂ. ಬಾಡಿಗೆ ಹಣ ನೀಡದೇ ಹೊರಟಿದ್ದ. ಇದನ್ನು ಕೇಳಿದ ಕಾರು ಚಾಲಕ ವೆಂಕಟೇಶ್ ಜೊತೆ ಕಾದಾಟಕ್ಕಿಳಿದ್ದಾನೆ.
ಬಳಿಕ ತನ್ನ ಸ್ನೇಹಿತರನ್ನು ಕರೆಯಿಸಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕ್ರಿಕೆಟ್ ಬ್ಯಾಟ್, ಹಾಕಿ ಸ್ಟಿಕ್ಗಳಿಂದ ವೆಂಕಟೇಶ್ನನ್ನು ಥಳಿಸಿದ್ದಾರೆ. ಬಲವಾಗಿ ತಲೆಗೆ ಹೊಡೆದಿದ್ದರಿಂದ ಚಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕಾರು ಮಾಲೀಕನನ್ನೂ ವಿವೇಕ್ರೆಡ್ಡಿ ಗ್ಯಾಂಗ್ ಥಳಿಸಿದೆ. ಮರುದಿನ ತಮ್ಮ ಮೇಲೆಯೇ ಹಲ್ಲೆ ಮಾಡಲಾಗಿದೆ ಎಂದು ಹಲ್ಲೆಕೋರ ವಿವೇಕ್ರೆಡ್ಡಿ ದೂರು ನೀಡಿದ್ದಾನೆ.
ಆರೋಪಿಗಳಿಗೆ ಪೊಲೀಸ್ ನೆರವು? : ಹಲ್ಲೆಗೊಳಗಾದ ವೆಂಕಟೇಶ್ ಸ್ಥಿತಿ ಚಿಂತಾಜನಕವಾಗಿದೆ. 7 ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಕುಟುಂಬದವರು ಆತಂಕ ವ್ಯಕ್ತಪಡಿಸಿದರು. ಹಲ್ಲೆಕೋರ ವಿವೇಕ್ ರೆಡ್ಡಿ ನ್ಯಾಯಾಲಯಕ್ಕೆ ಶರಣಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಮಧ್ಯೆಯೇ ಆರೋಪಿ ಗ್ಯಾಂಗ್ ಅನ್ನು ಪ್ರಕರಣದಿಂದ ತಪ್ಪಿಸಲು ಕಾನ್ಸ್ಟೇಬಲ್ ಒಬ್ಬರು ನೆರವು ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಹಲ್ಲೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಹಲ್ಲೆ ನಡೆಸಿದ ಯುವಕರ ವಿವರ ಸಂಗ್ರಹಿಸಲಾಗುತ್ತಿದೆ. ಆರೋಪಿಗಳಿಗೆ ಪೊಲೀಸರು ಸಹಕಾರ ನೀಡಿರುವುದು ದೃಢಪಟ್ಟರೆ ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಶಂಶಾಬಾದ್ ಡಿಸಿಪಿ ಜಗದೀಶ್ವರ್ ರೆಡ್ಡಿ ತಿಳಿಸಿದರು.
ಓದಿ: ತಮಿಳುನಾಡಿನಿಂದ ಕಳ್ಳತನವಾಗಿದ್ದ ಸಾವಿರ ವರ್ಷ ಹಳೆಯ ಪಾರ್ವತಿ ವಿಗ್ರಹ ನ್ಯೂಯಾರ್ಕ್ನಲ್ಲಿ ಪತ್ತೆ