ನವದೆಹಲಿ : ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದು, ಗಡ್ಕರಿ ತಮ್ಮ ಮೈಕ್ರೋಫೋನ್ ವಾಲ್ಯೂಮ್ ಹೆಚ್ಚಿಸಿಕೊಳ್ಳಬೇಕು ಮತ್ತು ಇನ್ನುಳಿದ ಕೇಂದ್ರ ಸಚಿವರು ಅನ್ ಮ್ಯೂಟ್ ಮಾಡಿಕೊಳ್ಳಬೇಕು ಎಂದಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ಎಲ್ಲಾ ನಿರ್ಧಾರಗಳನ್ನು ಕೇವಲ ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ತೆಗೆದುಕೊಳ್ಳುತ್ತಾರೆ. ಇಲ್ಲಿ ಯಾರು ಕೇಂದ್ರ ಸಚಿವರು ಎಂಬುದು ಗಣನೆಗೆ ಬರುವುದೇ ಇಲ್ಲ. ನನ್ನ ಪ್ರಕಾರ ಗಡ್ಕರಿಯವರು ಮಾತ್ರ ಅವಾಗವಾಗ ಸ್ವಲ್ಪ ಧ್ವನಿ ಎತ್ತುತ್ತಾರೆ. ಆದರೆ, ಅವರ ವಾಲ್ಯೂಮ್ ತುಂಬಾ ಕಡಿಮೆ ಆಗಿದೆ. ಹಾಗಾಗಿ, ಅವರು ತಮ್ಮ ಧ್ವನಿಯನ್ನು ಇನ್ನಷ್ಟು ಏರಿಸಬೇಕು. ಅನ್ಮ್ಯೂಟ್ ಮಾಡಿ ಇಡಬೇಕು ಎಂದು ಚಿದಂಬರಂ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು. ಎಲ್ಲಾ ನಿರ್ಧಾರಗಳನ್ನು ಪ್ರಧಾನಿ ಒಬ್ಬರೇ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ದೇಶದಲ್ಲಿ ಎಲ್ಲರಿಗೂ ಗೊತ್ತು. ಅದು ಹಣಕಾಸು ಸಚಿವರು 'ಎಕ್ಸ್' ಆಗಿರಲಿ, 'ವೈ' ಆಗಿರಲಿ. ಮೋದಿಯವರು ತಾನೇ ಹಣಕಾಸು ಸಚಿವ, ತಾನೇ ರಕ್ಷಣಾ ಸಚಿವ, ತಾನೇ ವಿದೇಶಾಂಗ ಸಚಿವ ಮತ್ತು ತಾನೇ ಕ್ರೀಡಾ ಸಚಿವ ಎಂದು ತಿಳಿದುಕೊಂಡಿದ್ದಾರೆ. ಇಲ್ಲಿ ಯಾರು ಸಚಿವರು ಎಂಬುದೇ ಗೊಂದಲಮಯ ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ.
ಓದಿ : ಚೀನಾ - ಭಾರತ ನಡುವೆ ಇಂದು ಮಾತುಕತೆ ಸಾಧ್ಯತೆ
ಇತ್ತೀಚೆಗೆ ಹಣದುಬ್ಬರದ ಬಗ್ಗೆ ಗಡ್ಕರಿಯವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಚಿದಂಬರಂ, ಇದೇ ಕಾರಣಕ್ಕೆ ನಾನು ಗಡ್ಕರಿಯವರ ಹೆಸರನ್ನು ಉಲ್ಲೇಖಿಸಿದ್ದು, ಅವರು ಹೆಚ್ಚು ಮಾತನಾಡಬೇಕು. ಸಂಪುಟ ಸಭೆಯಲ್ಲಿ ಮಾತನಾಡಬೇಕು. ಅವರು ತಮ್ಮ ಮೈಕ್ರೋಫೋನ್ನ ವಾಲ್ಯೂಮ್ ಅನ್ನು ಹೆಚ್ಚಿಸಿಕೊಳ್ಳಬೇಕು ಎಂದಿದ್ದಾರೆ.
ಅದೇ ರೀತಿ ಇತರ ಸಚಿವರು ತಮ್ಮ ವಾಲ್ಯೂಮ್ ಅನ್ಮ್ಯೂಟ್ ಮಾಡಿಕೊಳ್ಳಬೇಕು. ಈಗ ಅವರೆಲ್ಲ ಮ್ಯೂಟ್ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಟೀಕಿಸಿದ್ದಾರೆ.