ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಶುಕ್ರವಾರ ಮಾತನಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಕಣದಲ್ಲಿರುವ ಪಕ್ಷದ ನಾಯಕರಲ್ಲಿ ಯಾವುದೇ ಸ್ಪರ್ಧೆ ಇಲ್ಲ ಎಂದು ಹೇಳಿದ್ದಾರೆ. ಇಲ್ಲಿ ಸೌಹಾರ್ದಯುತವಾದ ಸ್ಪರ್ಧೆ (ಫ್ರೆಂಡ್ಲಿ) ಮಾತ್ರ ಇದೆ ಎಂದು ಹೇಳಿದ್ದಾರೆ.
ನಾವೆಲ್ಲರೂ ಒಂದೇ ಸಿದ್ಧಾಂತ, ಮೌಲ್ಯಗಳು ಮತ್ತು ಆದರ್ಶಗಳನ್ನು ಪಾಲಿಸುತ್ತೇವೆ.. ಪಕ್ಷವನ್ನು ಬಲಪಡಿಸಬೇಕೆಂದು ನಾವು ಬಯಸುತ್ತೇವೆ. ಇದು ಸೌಹಾರ್ದ ಸ್ಪರ್ಧೆಯಾಗಿದೆ, ಇದರಲ್ಲಿ ಯಾವುದೇ ಪೈಪೋಟಿ ಇಲ್ಲ ಎಂದು ತರೂರ್ ಇಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ನಾನು ಮಧ್ಯಾಹ್ನ ನಾಮಿನೇಶನ್ ಫೈಲಿಂಗ್ ಮಾಡಲಿದ್ದೇನೆ. ನೀವು ನನ್ನನ್ನು 24, ಅಕ್ಬರ್ ರಸ್ತೆಯಲ್ಲಿ ನೋಡುವಿರಿ ಎಂದು ತಿರುವನಂತಪುರಂ ಸಂಸದರು ಹೇಳಿದರು. ಮೂಲಗಳ ಪ್ರಕಾರ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಉಮೇದುವಾರಿಕೆ ಕುರಿತು ಕೇಳಿದ ಪ್ರಶ್ನೆಗೆ, ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದರೆ ಪಕ್ಷಕ್ಕೆ ಉತ್ತಮ ಎಂದು ತರೂರ್ ಹೇಳಿದರು.
ಖರ್ಗೆಯವರು ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳನ್ನು ನಾನು ನೋಡುತ್ತಿದ್ದೇನೆ. ಅವರು ಕೂಡ ನನ್ನ ಬಹಳ ಗೌರವಾನ್ವಿತ ಸಹೋದ್ಯೋಗಿ, ನಾವು ಲೋಕಸಭೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಹೆಚ್ಚು ಜನರು ಕಣದಲ್ಲಿರುವುದು ಒಳ್ಳೆಯದು ಎಂದು ತರೂರ್ ಹೇಳಿದರು.
ನಾಮಪತ್ರ ಸಲ್ಲಿಸುವ ಮುನ್ನ, ತರೂರ್ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಲು ರಾಜ್ ಘಾಟ್‌ಗೆ ಭೇಟಿ ನೀಡಿದರು. ತಾವು ಸ್ಪರ್ಧೆಯಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆಯೇ ಎಂದು ಕೇಳಿದಾಗ ಕಾಂಗ್ರೆಸ್ ತರೂರ್ ಅಂಥ ಸಾಧ್ಯತೆಯನ್ನು ಅಲ್ಲಗಳೆದರು.