ಪಾಟ್ನಾ (ಬಿಹಾರ): ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಬಳಿಕ ಇದೀಗ ಬಿಹಾರ ಸರ್ಕಾರ ಕೂಡ ರಕ್ಷಾಬಂಧನದಂದು ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವುದಾಗಿ ಘೋಷಿಸಿದೆ. ಮಹಿಳೆಯರು ಆಗಸ್ಟ್ 21ರ ಮಧ್ಯರಾತ್ರಿಯಿಂದ ಆಗಸ್ಟ್ 22ರ ಮಧ್ಯರಾತ್ರಿಯವರೆಗೆ ಉಚಿತ ಬಸ್ ಸೇವೆಗಳ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದೆ.
ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಲು ಈಗಾಗಲೇ ಮಾಸಿಕ ಪಾಸ್‌ನಲ್ಲಿ ವಿಶೇಷ ವಿನಾಯಿತಿಗಳನ್ನು ನೀಡಲಾಗುತ್ತಿದೆ. ಮಹಿಳೆಯರ ಸುರಕ್ಷತೆಗಾಗಿ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದೀಗ ರಾಖಿ ಹಬ್ಬದ ದಿನದಂದು ಮಹಿಳೆಯರು ಉಚಿತವಾಗಿ ಪ್ರಯಾಣಿಸಲಿದ್ದಾರೆ ಎಂದು ಬಿಹಾರ ರಾಜ್ಯ ರಸ್ತೆ ಸಾರಿಗೆ ನಿಗಮ (ಬಿಎಸ್ಆರ್ಟಿಸಿ)ದ ಆಡಳಿತಾಧಿಕಾರಿ ಶ್ಯಾಮ್ ಕಿಶೋರ್ ತಿಳಿಸಿದ್ದಾರೆ.
ಇದನ್ನೂ ಓದಿ: ರಕ್ಷಾಬಂಧನದಂದು ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸಲಿರುವ ಯೋಗಿ ಸರ್ಕಾರ
ನಗರ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಪ್ರಯಾಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಕ್ಷಾಬಂಧನದಂದು ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ಬಿಹಾರದ ಸಾರಿಗೆ ಸಚಿವೆ ಶೀಲಾ ಕುಮಾರಿ ಹೇಳಿದ್ದಾರೆ.
ಇದಕ್ಕೂ ಮುನ್ನ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ರಾಜ್ಯದ ಮಹಿಳೆಯರಿಗೆ ರಕ್ಷಾಬಂಧನದಂದು ಉಚಿತ ಬಸ್ ಸೇವೆ ಒದಗಿಸುವುದಾಗಿ ಘೋಷಿಸಿದ್ದರು.
ರಕ್ಷಾಬಂಧನದ ಮಹತ್ವ
ಆಗಸ್ಟ್ 22ರಂದು ರಕ್ಷಾಬಂಧನ ಅಥವಾ ರಾಖಿ ಹಬ್ಬವನ್ನು ದೇಶದ ಜನತೆ ಆಚರಿಸಲಿದೆ. ಇದು ಸಹೋದರ- ಸಹೋದರಿಯರ ನಡುವಿನ ಶುಭ ಬಂಧವನ್ನು ಆಚರಿಸುವ ದಿನವಾಗಿದೆ. ಭಾರತದ ಪ್ರಮುಖ ಹಬ್ಬಗಳಲ್ಲಿ ಇದು ಕೂಡಾ ಒಂದಾಗಿದೆ. ಮಹಾಭಾರತದ ಮಹಾಕಾವ್ಯದಲ್ಲಿ ಇದರ ಬಗ್ಗೆ ಉಲ್ಲೇಖವಿದೆ. ದ್ರೌಪದಿ ತನ್ನ ಸೀರೆ ಹರಿದು, ಅದನ್ನು ಶ್ರೀಕೃಷ್ಣನ ಮಣಿಕಟ್ಟಿನ ಮೇಲೆ ಕಟ್ಟಿ, ರಕ್ಷಣೆಗಾಗಿ ಆಶೀರ್ವಾದ ಪಡೆದಿದ್ದಳಂತೆ.