ಮಹೆಬೂಬಾಬಾದ್, ತೆಲಂಗಾಣ: ಕಾರೊಂದು ಬಾವಿಗೆ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟರೇ, ಮೂರು ಜೀವಗಳು ಬದುಕುಳಿದಿವೆ. ಆ ಮೂರು ಜೀವಗಳನ್ನು ಸರಿಯಾದ ಸಮಯಕ್ಕೆ 10ನೇ ತರಗತಿಯ ವಿದ್ಯಾರ್ಥಿಗಳು ಬಚಾವ್ ಮಾಡಿದ್ದಾರೆ.
ದರ್ಗಾ ದರ್ಶನ ಮಾಡಿ ಹಿಂದಿರುಗುತ್ತಿದ್ದ ವೇಳೆ ಅಪಘಾತ: ಮಹಬೂಬಾಬಾದ್ ಜಿಲ್ಲೆಯ ಕೇಸಮುದ್ರಂ ತಾಲೂಕಿನ ಕಂದೂರಿನಲ್ಲಿ ಶುಕ್ರವಾರ ಸಂಜೆ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳು ಮತ್ತು ಪೊಲೀಸರ ಪ್ರಕಾರ, ವರಂಗಲ್ ಜಿಲ್ಲೆಯ ಪರ್ವತಗಿರಿ ತಾಲೂಕಿನ ಅಣ್ಣಾರಾಮ್ ಷರೀಫ್ ದರ್ಗಾದಲ್ಲಿ ಜನಗಾಮ ಜಿಲ್ಲೆಯ ಪಾಲಕುರ್ತಿಯ ಕಂದೂರು ಗ್ರಾಮದ ಸಂಬಂಧಿಕರು ಕಾರ್ಯಕ್ರಮ ನಡೆಸಿದ್ದರು.
ಕಾರಿನಲ್ಲಿ ಏಳು ಜನರು ಪ್ರಯಾಣ: ಈ ಕಾರ್ಯಕ್ರಮಕ್ಕೆ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಟೇಕುಲಪಲ್ಲಿ ತಾಲೂಕಿನ ಗೋಳ್ಯತಾಂಡದ ಗುಗುಲೋತು ಬಿಕ್ಕು (ಚಾಲಕ), ಅವರ ಸಹೋದರಿ ಬಾನೋತು ಅಚ್ಚಲಿ (38), ಬಾವ ಭದ್ರು (45), ಸೊಸೆ ಸುಮಲತಾ ಮತ್ತು ಮೊಮ್ಮಗ ದೀಕ್ಷಿತ್ ಕಾರಿನಲ್ಲಿ ಬಂದಿದ್ದರು. ಸಂಜೆ ಕಾರ್ಯಕ್ರಮ ಮುಗಿದಿದೆ. ವಾಪಸ್ ಆಗುತ್ತಿದ್ದ ವೇಳೆ ಇದೇ ಕಾರ್ಯಕ್ರಮಕ್ಕೆ ಬಂದಿದ್ದ ಮಹಬೂಬಾಬಾದ್‌ನ ಭವಾನಿನಗರ ತಾಂಡಾದ ಗುಗುಲೋತ್ತು ಲಲಿತಾ (45) ಹಾಗೂ ಒಂಬತ್ತನೇ ತರಗತಿ ಓದುತ್ತಿರುವ ಆಕೆಯ ಮಗ ಸುರೇಶ್ (15) ನಾವು ಸಹ ನಿಮ್ಮ ಕಾರಿನಲ್ಲಿ ಬರುತ್ತೇವೆ ಎಂದು ಬಿಕ್ಕು ಅವರನ್ನು ಕೇಳಿದ್ದಾರೆ. ಬಿಕ್ಕು ಸಹ ಆಯ್ತು ಎಂದು ಹತ್ತಿಸಿಕೊಂಡು ಮುಂದೆ ಸಾಗಿದ್ದಾರೆ.
ಕಾರಿನಲ್ಲಿ ಒಟ್ಟು ಏಳು ಜನರು ಪ್ರಯಾಣಿಸುತ್ತಿದ್ದರು. ಕಾರು ಚಾಲಕ ಬಿಕ್ಕು ಈ ಭಾಗಕ್ಕೆ ಹೊಸಬನಾಗಿದ್ದರಿಂದ ದಾರಿ ತಿಳಿಯದ ಕಾರಣ ಕೆಸಮುದ್ರದ ಮೇಲ್ಸೇತುವೆಯಿಂದ ಬೈಪಾಸ್ ಮೂಲಕ ತೆರಳುತ್ತಿದ್ದರು. ಸಂಜೆ 6.30ರ ಸುಮಾರಿಗೆ ಲಚ್ಚಿರಾಂತಂಡ ಬಳಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಐದು ಅಡಿ ದೂರದಲ್ಲಿರುವ ಕೃಷಿ ಬಾವಿಗೆ ಬಿದ್ದಿದೆ.
ವಿದ್ಯಾರ್ಥಿಗಳ ಸಾಹಸದಿಂದ ಉಳಿದ ಮೂರು ಜೀವಗಳು: ಕಾಟ್ರಪಳ್ಳಿಯ ನುನಾವಟು ಸಿದ್ದು ಮತ್ತು ನರಸಿಂಹುಲಗುಡೇನಿಯ ಬುರ್ರಾ ರಂಜಿತ್ ಅವರು ಕೇಸಮುದ್ರದ ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಶುಕ್ರವಾರ ಸಂಜೆ ಶಾಲೆ ಮುಗಿಸಿಕೊಂಡು ಹೊರ ಬಂದ್ದಿದ್ದಾರೆ. ಅದೇ ವೇಳೆಗೆ ಶಾಲೆಯ ಮುಂಭಾಗದ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಪಕ್ಕದ ಕೃಷಿ ಬಾವಿಗೆ ಬಿದ್ದಿದೆ. ಇದನ್ನು ಗಮನಿಸಿದ ಬಾಲಕರು ಬಾವಿಯತ್ತ ಓಡಿದ್ದಾರೆ.
ಮುಳುಗುತ್ತಿದ್ದ ಕಾರಿನಲ್ಲಿದ್ದ ಜನರು ತಮ್ಮ ಕೈಗಳಿಂದ ಕಿಟಕಿ ಗಾಜು ಹೊಡೆಯುತ್ತಿರುವುದನ್ನು ಸಿದ್ದು ಮತ್ತು ರಂಜಿತ್ ಗಮನಿಸಿದ್ದಾರೆ. ತಡ ಮಾಡದೇ ರಂಜಿತ್ ಮತ್ತು ಸಿದ್ದು ಬಾವಿಗೆ ಹಾರಿ ಕಾರಿನ ಮುಂಭಾಗದ ಗಾಜನ್ನು ಕೈಯಿಂದ ಒಡೆದಿದ್ದಾರೆ. ಅಷ್ಟೋತ್ತಿಗಾಗಲೇ ಚಾಲಕ ಬಿಕ್ಕು ಕಾರಿನಿಂದ ಇಳಿದು ದಡ ತಲುಪಿದ್ದಾನೆ. ಸುಮಲತಾಳನ್ನು ಸಿದ್ದು ಕಾಪಾಡಿದ್ರೆ, ರಂಜಿತ್ ಎರಡು ವರ್ಷದ ದೀಕ್ಷಿತ್‌ನನ್ನು ರಕ್ಷಿಸಿದರು. ಕಾರಿನ ಅರ್ಧಕ್ಕೂ ಹೆಚ್ಚು ಭಾಗ ನೀರಿನಲ್ಲಿ ಮುಳುಗಿತ್ತು. ಅವರ ಸಾಹಸದಿಂದ ಮೂವರ ಪ್ರಾಣ ಬದುಕುಳಿಯಿತು. ಆದ್ರೆ ನಾಲ್ವರು ನೀರುಪಾಲಾದರು.
ಅಪಘಾತದಲ್ಲಿ ನಾಲ್ವರು ಸಾವು: ದಂಪತಿಯಾದ ಬಾನೋತು ಅಚ್ಚಲಿ (38), ಬಾವ ಭದ್ರು (45), ಮತ್ತು ತಾಯಿ ಗುಗುಲೋತ್ತು ಲಲಿತಾ (45) ಹಾಗೂ ಆಕೆಯ ಮಗ ಸುರೇಶ್ (15) ಸ್ಥಳದಲ್ಲೇ ಸಾವನ್ನಪ್ಪಿದರು. ಬಿಕ್ಕು, ಸುಮಲತಾ ಮತ್ತು ಎರಡು ವರ್ಷದ ದೀಕ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂರು ಜೀವಗಳನ್ನು ಉಳಿಸಿದ ರಂಜಿತ್ ಮತ್ತು ಸಿದ್ದು ಸಾಹಸವನ್ನು ಗ್ರಾಮವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ಸ್ಥಳೀಯರು ಹಾಗೂ ಪೊಲೀಸರು ಜೆಸಿಬಿ ಸಹಾಯದಿಂದ ಮೃತದೇಹ ಹಾಗೂ ಕಾರನ್ನು ಹೊರ ತೆಗೆದಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಹಬೂಬಾಬಾದ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ವಿದ್ಯುತ್ ಶಾಕ್ಗೆ ಬಾಲಕ - ನಾಲ್ವರು ರೈತರು ಸೇರಿ ಐವರು ಬಲಿ: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!