ಸಲಂಬರ್(ರಾಜಸ್ಥಾನ): ರಾಜ್ಯದಲ್ಲಿ ನೂತನವಾಗಿ ರಚನೆಯಾದ ಸಾಲಂಬರ್ ಜಿಲ್ಲೆಯ ಲಸಾಡಿಯಾ ಪ್ರದೇಶದಲ್ಲಿ ಗುರುವಾರ ರಾತ್ರಿ ಒಂದೇ ಕುಟುಂಬದ ನಾಲ್ವರು ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾರೆ. ಗ್ರಾಮಸ್ಥರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಮನೆ ಸಮೀಪದ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
"ಲಸಾಡಿಯಾ ಉಪವಿಭಾಗದ ಧಿಕಿಯಾದ ಬೋಡ್ ಫಾಲಾದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ಶಾಕ್ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ" ಎಂದು ಸಲಂಬರ್ ಡಿಎಸ್‌ಪಿ ದುಂಗರ್ ಸಿಂಗ್ ತಿಳಿಸಿದರು. "ಬೋಡ್ ಫಾಲಾದಲ್ಲಿ ವಾಸಿಸುವ ಉಂಕರ್ ಮೀನಾ ಅವರ ಮನೆಯಲ್ಲಿ ದುರಂತ ಘಟಿಸಿದೆ. ಮನೆಯ ಸಮೀಪವೇ ಇದ್ದ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಮನೆಯ ಕಬ್ಬಿಣದ ಗೇಟ್ಗೆ ತಂತಿ ಸ್ಪರ್ಶಿಸಿದೆ. 68 ವರ್ಷದ ಉಂಕರ್ ಮೀನಾ ಅವರಿಗೆ ಕರೆಂಟ್ ತಗುಲಿದ್ದು, ಸಹಾಯಕ್ಕೆ ಧಾವಿಸಿದ ಪತ್ನಿ ಭನ್ವಾರಿ (65) ಅವರಿಗೂ ವಿದ್ಯುತ್ ತಗುಲಿತು. ದಂಪತಿಯನ್ನು ರಕ್ಷಿಸಲು ಪ್ರಯತ್ನಿಸಿದಾಗ ಅವರ 25 ವರ್ಷದ ಮಗ ದೇವಿ ಲಾಲ್ ಮತ್ತು 22 ವರ್ಷದ ಮಗಳು ಮಂಗಿಗೆ ಕೂಡ ವಿದ್ಯುತ್ ಸ್ಪರ್ಶಿಸಿ ಸುಟ್ಟು ಕರಕಲಾಗಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡ.. 60 ಕ್ಕೂ ಹೆಚ್ಚು ಮನೆಗಳಲ್ಲಿ ಕತ್ತಲು
ಅಕ್ಕಪಕ್ಕದ ಜನರು ಘಟನೆ ಕುರಿತು ಧಿಕಿಯಾ ಸರಪಂಚ್ ಪೂನಂಚಂದ್ ಮೀನಾ ಅವರಿಗೆ ತಿಳಿಸಿದ್ದಾರೆ. ನಂತರ ಸರಪಂಚ್ ಪೊಲೀಸರಿಗೆ ಮತ್ತು ಜಿಲ್ಲಾಡಳಿತಕ್ಕೆ ವಿಷಯ ತಿಳಿಸಿದ್ದು, ನಾಲ್ವರ ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಡಿಎಸ್‌ಪಿ ಹೇಳಿದರು. ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆದ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು.
ಕೂನ್ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ಸಿಂಗ್ ಶಕ್ತಾವತ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಸಲಂಬರ್ ಜಿಲ್ಲಾಧಿಕಾರಿ ಪ್ರತಾಪ್ ಸಿಂಗ್ ಕೂಡ ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ಶಾಸಕ ಅಭ್ಯರ್ಥಿ ಕನ್ಹಯ್ಯಾಲಾಲ್ ಮೀನಾ, ಸ್ಥಳೀಯ ಸರಪಂಚ್ ಪೂನಂ ಚಂದ್ ಮೀನಾ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್: ನಂಜನಗೂಡಿನ ಕಸ್ತೂರಬಾ ವಿದ್ಯಾಲಯದ ಎಲೆಕ್ಟ್ರಾನಿಕ್ ಉಪಕರಣಗಳು ಭಸ್ಮ