ನೈನಿತಾಲ್ (ಉತ್ತರಾಖಂಡ್): ಖಗೋಳ ವಿಜ್ಞಾನ ಕ್ಷೇತ್ರದಲ್ಲಿಆರ್ಯಭಟ್ಟ ಸಂಶೋಧನಾ ಸಂಸ್ಥೆ (ಎಆರ್‌ಐಇಎಸ್) ಐತಿಹಾಸಿಕ ಸಾಧನೆ ಮಾಡಿದೆ. ಉತ್ತರಾಖಂಡ್ನ ನೈನಿತಾಲ್ನಲ್ಲಿರುವ ದೇವಸ್ಥಾಳ್ನಲ್ಲಿ ವಿಶ್ವದ ಮೊದಲ ಇಂಟರ್ನ್ಯಾಷನಲ್ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ (ಐಎಲ್ಎಂಟಿ) ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ. ಒಂದು ತಿಂಗಳ ಅಧ್ಯಯನದ ನಂತರ ಈ ಟೆಲಿಸ್ಕೋಪ್ ಮೂಲಕ ತೆಗೆದ ಬಾಹ್ಯಾಕಾಶದ ಮೊದಲ ಚಿತ್ರವನ್ನೂ ವಿಜ್ಞಾನಿಗಳು ಪ್ರಸ್ತುತಪಡಿಸಿದ್ದಾರೆ.
50 ಕೋಟಿ ರೂ. ವೆಚ್ಚದಲ್ಲಿ ಈ ಪ್ರಥಮ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ಸ್ಥಾಪಿಸಲಾಗಿದ್ದು, ಮೊದಲ ಹಂತದಲ್ಲೇ ಸಾವಿರಾರು ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಗೆಲಾಕ್ಸಿ ಹಾಗೂ ನಕ್ಷತ್ರಗಳ ಚಿತ್ರಗಳನ್ನು ತೆಗೆಯುವ ಮೂಲಕ ದಾಖಲೆ ನಿರ್ಮಿಸಿದೆ. ಈ ಲಿಕ್ವಿಡ್ ಟೆಲಿಸ್ಕೋಪ್‌ನ ಸಹಾಯದಿಂದ ನಕ್ಷತ್ರಪುಂಜದಲ್ಲಿನ ದೈನಂದಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಬಹುದು ಎಂದು ಎಆರ್‌ಐಇಎಸ್ ನಿರ್ದೇಶಕ ಪ್ರೊ.ದೀಪಂಕರ್ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ.
ಎಂಟು ದೇಶಗಳ ನೆರವು: 2017ರಲ್ಲಿ ಬೆಲ್ಜಿಯಂ, ಕೆನಡಾ, ಪೋಲೆಂಡ್, ಉಜ್ಬೇಕಿಸ್ತಾನ್ ಸೇರಿದಂತೆ ಎಂಟು ದೇಶಗಳ ನೆರವಿನೊಂದಿಗೆ ಅಂತಾರಾಷ್ಟ್ರೀಯ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ಯೋಜನೆಯನ್ನು ಎಆರ್‌ಐಇಎಸ್ ಆರಂಭಿಸಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಇದರ ಕಾರ್ಯಾಚರಣೆಯಲ್ಲಿ ವಿಳಂಬವಾಗಿತ್ತು. ಇದೀಗ ಕಳೆದ ತಿಂಗಳಿನಿಂದ ಮಿರರ್ ಟೆಲಿಸ್ಕೋಪ್ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ.
ಸಾಂಪ್ರದಾಯಿಕ ಟೆಲಿಸ್ಕೋಪ್‌ಗೆ ಹೋಲಿಸಿದರೆ ಈ ಟೆಲಿಸ್ಕೋಪ್ ದೊಡ್ಡದಾಗಿದೆ. ಇದರಿಂದ ಲೆನ್ಸ್ ಸ್ವಚ್ಛಗೊಳಿಸುವ ಮತ್ತು ಅದರ ನಿರ್ವಹಣೆಯ ಸಮಯವೂ ಉಳಿತಾಯವಾಗುತ್ತದೆ. ಈ ಟೆಲಿಸ್ಕೋಪ್ನಲ್ಲಿ ಮೊದಲ ಬಾರಿಗೆ ಪಾದರಸವನ್ನು (ಮರ್ಕ್ಯುರಿ) ದ್ರವ ರೂಪದಲ್ಲಿ ಬಳಸಲಾಗಿದೆ.
ಈ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ನಕ್ಷತ್ರಪುಂಜಗಳು, ಬಾಹ್ಯಾಕಾಶ ಅವಶೇಷಗಳ ಅಧ್ಯಯನ ಮಾಡಲು ಪ್ರಯೋಜನಕಾರಿಯಾಗಿದೆ. ಮೊದಲ ಹಂತದಲ್ಲಿಯೇ 95 ಸಾವಿರ ಜ್ಯೋತಿರ್ವರ್ಷಗಳ ದೂರದಲ್ಲಿರುವ ಎನ್ಜಿಸಿ 4274 ನಕ್ಷತ್ರಪುಂಜದ ಸ್ಪಷ್ಟ ಚಿತ್ರ ತೆಗೆಯುವ ಮೂಲಕ ದಾಖಲೆ ನಿರ್ಮಿಸಿದೆ ಎಂದು ಮತ್ತೊಬ್ಬ ವಿಜ್ಞಾನಿ ಡಾ.ಬ್ರಿಜೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಅಭಿವೃದ್ದಿಯಾಗ್ತಿದೆ 'ಆಕಾಶದಲ್ಲಿ ಹಾರುವ ಟ್ಯಾಕ್ಸಿ'... 2024ರಿಂದ ಕಾರ್ಯಾರಂಭ ಸಾಧ್ಯತೆ!