ಸಮಸ್ತಿಪುರ (ಬಿಹಾರ): ಉತ್ತರದಲ್ಲಿ ವರುಣನ ಜೊತೆ ಸಿಡಿಲಿನ ಆರ್ಭಟ ಜೋರಾಗಿದ್ದು, ಅನೇಕರು ಸಾವನ್ನಪ್ಪಿದ್ದಾರೆ. ಆದ್ರೆ ಮಳೆ ನೀರಿನಿಂದ ಹೊಂಡವೊಂದು ತುಂಬಿದ್ದು, ಆ ಹೊಂಡದಲ್ಲಿ ತಾಯಿ ಮತ್ತು ಆಕೆಯ ನಾಲ್ಕು ಮಕ್ಕಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಇಲ್ಲಿನ ಮೋರ್ಖಾನಿ ನಗರದಲ್ಲಿ ನಡೆದಿದೆ.
ಮೋರ್ಖಾನಿ ಗ್ರಾಮದ ನಿವಾಸಿ ರಾಮ್ ಪುಕಾರ್ ಯಾದವ್ ಮತ್ತು ಕೋಕಲಿ ದೇವಿ ದಂಪತಿಗೆ ನಾಲ್ಕು ಮಕ್ಕಳು. ಕೋಕಲಿ ದೇವಿ ತನ್ನ ನಾಲ್ವರು ಮಕ್ಕಳೊಂದಿಗೆ ಹೊಲದಲ್ಲಿ ಕೆಲಸ ಮಾಡಲು ತೆರಳಿದ್ದರು. ಈ ವೇಳೆ ರಭಸವಾಗಿ ಮಳೆ ಸುರಿದಿದ್ದು, ಮಳೆ ನೀರಿನಿಂದಾಗಿ 12 ಅಡಿಗಳ ಆಳದ ಹೊಂಡವೊಂದು ತುಂಬಿದೆ.
ನೀರು ತುಂಬಿದ್ದ ಹೊಂಡದಲ್ಲಿ ಮೊದಲು ಮಗನೊಬ್ಬ ಬಿದ್ದಿದ್ದಾನೆ. ಬಳಿಕ ಆತನನ್ನು ಬಚಾವ್ ಮಾಡಲು ತಾಯಿ ಕೋಕಲಿ ದೇವಿ ತೆರಳಿದ್ದಾಳೆ. ತಾಯಿ ಹಿಂದೆ ಇಬ್ಬರು ಹೆಣ್ಣುಮಕ್ಕಳು ಮತ್ತು ಮತ್ತೊಬ್ಬ ಮಗ ತೆರಳಿದ್ದು, ಅವರು ಸಹ ಹೊಂಡದಲ್ಲಿ ಮುಳುಗಿದ್ದಾರೆ. ಇದನ್ನು ನೋಡಿದ ಸ್ಥಳೀಯ ನಿವಾಸಿಗಳು ಕೂಡಲೇ ಅವರೆಲ್ಲರನ್ನು ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ದರು. ಆದ್ರೆ ಅವರೆಲ್ಲರೂ ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಮೃತರು ರಾಮ್ ಪುಕಾರ್ ಯಾದವ್ ಪತ್ನಿ ಕೋಕಲಿ ದೇವಿ (37), ಕೋಮಲ ಕುಮಾರಿ (16), ದೌಲತ ಕುಮಾರಿ (14), ಪಂಕಜ್ ಕುಮಾರ್ 12 ಮತ್ತು ಗೋಲು ಕುಮಾರ್ (10) ಎಂದು ಗುರುತಿಸಲಾಗಿದೆ. ಸುದ್ದಿ ತಿಳಿದಾಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತರ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸಮಸ್ತಿಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಒಂದೇ ಕುಟುಂಬದ ಐವರು ಸಾವನ್ನಪ್ಪಿರುವುದನ್ನು ಕಂಡು ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆ ಕುರಿತು ವಿಧಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.