ಅಸ್ಸೋಂ: ಮಾನ್ಸೂನ್ ಅಬ್ಬರಕ್ಕೆ ಅಸ್ಸೋಂ ತತ್ತರಿಸಿದೆ. ಭಾರಿ ಮಳೆಯಿಂದಾಗಿ ರಾಜ್ಯದ ಹಲವಾರು ಹಳ್ಳಿಗಳು ಜಲಾವೃತವಾಗಿವೆ. ಇಂದು ಕೂಡ ಸುರಿದ ಭಾರಿ ಮಳೆ, ಭೂಕುಸಿತದ ಅವಘಢಗಳಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ 62 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ, 32 ಜಿಲ್ಲೆಗಳ 31 ಲಕ್ಷ ಜನ ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದಾರೆ. 1.56 ಲಕ್ಷ ಜನರು ಈಗಾಗಲೇ ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರಗೊಂಡಿದ್ದಾರೆ.
ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ ದೋಣಿ: ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಬ್ರಹ್ಮಪುತ್ರ ನದಿ ದಾಟುತ್ತಿದ್ದ ವೇಳೆ ದೋಣಿ ಮುಳುಗಡೆಯಾದ ಘಟನೆ ದಿಬ್ರುಗಢದ ರೋಮೋರಿಯಾದಲ್ಲಿ ನಡೆದಿದೆ. ಘಟನೆಯಲ್ಲಿ 5 ಮಂದಿ ನಾಪತ್ತೆಯಾಗಿದ್ದು, ನಾಲ್ವರು ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. ಬೋಟ್ನಲ್ಲಿ 9 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ದೋಣಿ ಮಗುಚಿದೆ. ನಾಪತ್ತೆಯಾದ ಐವರಿಗಾಗಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ: ಅಸ್ಸೋಂನ 7 ಜಿಲ್ಲೆಗಳಲ್ಲಿ ಭಾರತೀಯ ಸೇನೆಯಿಂದ ಪ್ರವಾಹ ರಕ್ಷಣಾ ಕಾರ್ಯಾಚರಣೆ ಸತತ 4 ನೇ ದಿನವೂ ಮುಂದುವರೆದಿದೆ. ರೋಗಿಗಳು, ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 4500 ಪ್ರವಾಹದಲ್ಲಿ ಸಿಕ್ಕಿಬಿದ್ದಿದ್ದ ಜನರನ್ನು ರಕ್ಷಿಸಲಾಗಿದೆ. ಅವರನ್ನು ತಾತ್ಕಾಲಿಕವಾಗಿ ನಿರ್ಮಿಸಲಾದ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಶಿಬಿರಗಳಿಗೆ ಸಕಾಲದಲ್ಲಿ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂದು ಗುವಾಹಟಿ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕುಸಿತದಲ್ಲಿ ಇಬ್ಬರು ಸಾವು: ಕ್ಯಾಚಾರ್ ಜಿಲ್ಲೆಯ ಬೋರಾಖೈ ಟೀ ಎಸ್ಟೇಟ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದರು. ಇಬ್ಬರ ಮೃತದೇಹಗಳು ಪತ್ತೆಯಾಗಿವೆ ಎಂದು ಕ್ಯಾಚಾರ್ ಜಿಲ್ಲಾ ಪರಿಷತ್ ಅಧ್ಯಕ್ಷ ಅಮಿತಾಭ್ ರೈ ತಿಳಿಸಿದ್ದಾರೆ.
ಓದಿ: ಅಗ್ನಿವೀರರ ಸಂಖ್ಯೆ ಮುಂದೆ 1 ಲಕ್ಷಕ್ಕೆ ಹೆಚ್ಚಳ, ಸೇನೆಗೆ ಹೋಶ್, ಜೋಶ್ ಬೇಕಿದೆ: ಸೇನಾ ಮುಖ್ಯಸ್ಥರು