ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆಗಳ ನಡುವೆ ಇಂದಿನಿಂದ 29ನೇ ಹಂತದ ಚುನಾವಣಾ ಬಾಂಡ್‌ಗಳ ಮಾರಾಟ ಪ್ರಕ್ರಿಯೆ ಪ್ರಾರಂಭವಾಗಿದೆ. ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಗುರುವಾರ (ನವೆಂಬರ್ 2) ಸುಪ್ರೀಂ ಕೋರ್ಟ್ ತನ್ನ ತೀರ್ಪು ಕಾಯ್ದಿರಿಸಿದ ನಂತರ, ಶನಿವಾರ (ನವೆಂಬರ್ 4) ಸರ್ಕಾರವು 29ನೇ ಹಂತದ ಎಲೆಕ್ಟೋರಲ್ ಬಾಂಡ್‌ಗಳನ್ನು ಬಿಡುಗಡೆ ಮಾಡಲು ಅನುಮೋದಿಸಿತು.
ಅಕ್ಟೋಬರ್ 31ರಂದು, ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಕಾಂಗ್ರೆಸ್ ನಾಯಕಿ ಜಯಾ ಠಾಕೂರ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸೇರಿದಂತೆ ನಾಲ್ಕು ಅರ್ಜಿಗಳ ವಿಚಾರಣೆ ಪ್ರಾರಂಭಿಸಿತು.
ಈ ಅರ್ಜಿಗಳ ವಿಚಾರಣೆಯ ನಂತರ, ಸುಪ್ರೀಂ ಕೋರ್ಟ್ ನವೆಂಬರ್ 2ರಂದು ತೀರ್ಪನ್ನು ಕಾಯ್ದಿರಿಸಿತು. ಇದರ ಎರಡು ದಿನಗಳ ನಂತರ ಇತ್ತೀಚಿನ ಸುತ್ತಿನ ಚುನಾವಣಾ ಬಾಂಡ್‌ಗಳ ವಿತರಣೆಗೆ ಸರ್ಕಾರ ಅಧಿಸೂಚನೆ ಹೊರಡಿಸಿತು. ಮಿಜೋರಾಂ ಮತ್ತು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನವೆಂಬರ್ 7ರಂದು (ನಾಳೆ ಮತದಾನ) ನಡೆಯಲಿದೆ. ಪಂಚ ರಾಜ್ಯಗಳ ಮತದಾನ ನವೆಂಬರ್ 30ರಂದು ಕೊನೆಗೊಳ್ಳಲಿದ್ದು, ಮತಗಳ ಎಣಿಕೆ ಡಿಸೆಂಬರ್ 3ರಂದು ನಡೆಯಲಿದೆ.
ಭಾರತ ಸರ್ಕಾರವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ 29 ಅಧಿಕೃತ ಶಾಖೆಗಳ ಮೂಲಕ ನವೆಂಬರ್ 6-20 ರಿಂದ ಚುನಾವಣಾ ಬಾಂಡ್‌ಗಳನ್ನು ವಿತರಿಸಲು ಮತ್ತು ಎನ್‌ಕ್ಯಾಶ್ ಮಾಡಲು ಅನುಮತಿ ನೀಡಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ತರುವ ಪ್ರಯತ್ನಗಳ ಭಾಗವಾಗಿ ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆಗೆ ಪರ್ಯಾಯವಾಗಿ ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಲಾಯಿತು. ಮೊದಲ ಬ್ಯಾಚ್ ಚುನಾವಣಾ ಬಾಂಡ್‌ಗಳನ್ನು ಮಾರ್ಚ್ 2018ರಲ್ಲಿ ಮಾರಾಟ ಮಾಡಲಾಯಿತು.
ಚುನಾವಣಾ ಬಾಂಡ್‌ಗಳನ್ನು ಅರ್ಹ ರಾಜಕೀಯ ಪಕ್ಷದ ಪರವಾಗಿ ಅಧಿಕೃತ ಬ್ಯಾಂಕ್‌ನೊಂದಿಗೆ ಅದರ ಬ್ಯಾಂಕ್ ಖಾತೆಯ ಮೂಲಕ ಮಾತ್ರ ಎನ್‌ಕ್ಯಾಶ್ ಮಾಡಲಾಗುತ್ತದೆ. ಎಸ್‌ಬಿಐ ಮಾತ್ರ ಚುನಾವಣಾ ಬಾಂಡ್‌ಗಳನ್ನು ವಿತರಿಸುವ ಅಧಿಕೃತ ಬ್ಯಾಂಕ್ ಆಗಿದೆ. ಅಧಿಕೃತ ಎಸ್‌ಬಿಐ ಶಾಖೆಗಳಲ್ಲಿ ಬೆಂಗಳೂರು, ಲಖನೌ, ಶಿಮ್ಲಾ, ಡೆಹ್ರಾಡೂನ್, ಕೋಲ್ಕತ್ತಾ, ಗುವಾಹಟಿ, ಚೆನ್ನೈ, ಪಾಟ್ನಾ, ನವದೆಹಲಿ, ಚಂಡೀಗಢ, ಶ್ರೀನಗರ, ಗಾಂಧಿನಗರ, ಭೋಪಾಲ್, ರಾಯ್‌ಪುರ ಮತ್ತು ಮುಂಬೈ ಶಾಖೆಗಳು ಸೇರಿವೆ.
ಚುನಾವಣಾ ಬಾಂಡ್‌ಗಳು ವಿತರಣೆಯ ದಿನಾಂಕದಿಂದ 15 ದಿನಗಳವರೆಗೆ ಮಾನ್ಯವಾಗಿರುತ್ತವೆ. ಈ ಗಡುವು ಮುಗಿದ ನಂತರ ಬಾಂಡ್ ಠೇವಣಿ ಮಾಡಿದರೆ, ಯಾವುದೇ ರಾಜಕೀಯ ಪಕ್ಷಕ್ಕೆ ಯಾವುದೇ ಪಾವತಿ ಮಾಡಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಚುನಾವಣಾ ಬಾಂಡ್‌ಗಳನ್ನು ಭಾರತೀಯ ನಾಗರಿಕರು ಅಥವಾ ದೇಶದಲ್ಲಿ ಸಂಘಟಿತ ಅಥವಾ ಸ್ಥಾಪಿಸಿದ ಘಟಕಗಳು ಖರೀದಿಸಬಹುದು. ಕಳೆದ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಪಡೆದ ಮತಗಳಲ್ಲಿ ಕನಿಷ್ಠ ಶೇ.1ರಷ್ಟು ಮತಗಳನ್ನು ಪಡೆದಿರುವ ನೋಂದಾಯಿತ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಸ್ವೀಕರಿಸಲು ಅರ್ಹವಾಗಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಕೆವೈಸಿಗಿಂತ ಚುನಾವಣಾ ಬಾಂಡ್ ಹೆಚ್ಚು ಪ್ರಯೋಜನಕಾರಿ: ಸುದೀರ್ಘ ವಿಚಾರಣೆ ಬಳಿಕ ತೀರ್ಪು ಕಾಯ್ದಿರಿಸಿದ ಸುಪ್ರೀಂ