ನಲ್ಗೊಂಡ (ತೆಲಂಗಾಣ): ನಿನ್ನೆ ರಕ್ಷಾಬಂಧನ ದಿನವಾಗಿದ್ದು, ದೇಶಾದ್ಯಂತ ಸಹೋದರ-ಸಹೋದರಿಯರು ಸಂಭ್ರಮದಿಂದ ರಾಖಿ ಹಬ್ಬವನ್ನ ಆಚರಿಸಿದ್ದಾರೆ. ಎಲ್ಲೆಲ್ಲೂ ದೂರದ ಊರುಗಳಿಂದ ಸಹೋದರನಿಗೆ ರಾಖಿ ಕಟ್ಟಲೆಂದು ಸಹೋದರಿಯರು, ರಾಖಿ ಕಟ್ಟಿಸಿಕೊಳ್ಳಲೆಂದು ಸಹೋದರರು ಬಂದಿದ್ದರು. ಉಡುಗೊರೆಗಳನ್ನು ನೀಡಿ ಖುಷಿ ಪಟ್ಟಿದ್ದರು. ಆದರೆ ಇಲ್ಲೊಂದು ಕುಟುಂಬದ ಮಹಿಳೆಯರಿಗೆ ಮೃತ ಸಹೋದರನ ಕೈಗೆ ರಾಖಿ ಕಟ್ಟುವ ಪರಿಸ್ಥಿತಿ ಎದುರಾಯ್ತು.
ನಲ್ಗೊಂಡ ಜಿಲ್ಲೆಯ ಮದ್ಗುಲಪಲ್ಲಿ ಮಂಡಲದ ಮಲಗುಡೆಂ ಗ್ರಾಮದಲ್ಲಿ ಇಂತಹದೊಂದು ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಚಿಂತಪಲ್ಲಿ ಲಕ್ಷ್ಮಯ್ಯ (50) ಎಂಬವರಿಗೆ ಐವರು ಸಹೋದರಿಯರಿದ್ದು, ಪ್ರತಿವರ್ಷದಂತೆ ಈ ವರ್ಷವೂ ಕೂಡ ರಕ್ಷಾಬಂಧನದ ಪ್ರಯುಕ್ತ ರಾಖಿ ಕಟ್ಟಲೆಂದು ಶನಿವಾರ ರಾತ್ರಿಯೇ ತವರು ಮನೆಗೆ ಬಂದಿದ್ದಾರೆ.
ಇದನ್ನೂ ಓದಿ: ಕೊರೊನಾ ಕರಿನೆರಳಲ್ಲೇ ಸರಳವಾಗಿ ರಕ್ಷಬಂಧನ ಆಚರಿಸಿ ಸಂಭ್ರಮಿಸಿದ ಒಡಹುಟ್ಟಿದವರು..
ಆದರೆ, ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಯ್ಯ ಅವರು ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಆ ಐವರು ಸಹೋದರಿಯರು ಅಂತ್ಯಕ್ರಿಯೆಗೂ ಮುನ್ನ ಕೊನೆಯ ಬಾರಿ ಅಣ್ಣನ ಕೈಗೆ ಕಣ್ಣೀರುಡುತ್ತಲೇ ರಾಖಿ ಕಟ್ಟಿದ್ದಾರೆ. ಈ ಮನಕಲಕುವ ದೃಶ್ಯವನ್ನು ಕಂಡು ಗ್ರಾಮಸ್ಥರು ಸಹ ಕಣ್ಣೀರು ಸುರಿಸಿದ್ದಾರೆ.