ನ್ಯೂಯಾರ್ಕ್( ಅಮೆರಿಕ): ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಆಡಳಿತರೂಢ ಡೆಮಾಕ್ರಾಟ್ ಪಕ್ಷದಿಂದ ಭಾರತೀಯ ಮೂಲದ ಅಮೆರಿಕನರು ಅಮೆರಿಕ ಸಂಸತ್ತಿಗೆ ಆಯ್ಕೆ ಆಗಿದ್ದಾರೆ. ರಾಜ ಕೃಷ್ಣಮೂರ್ತಿ, ರೊ ಖನ್ನಾ, ಪ್ರಮೀಳಾ ಜಯಪಾಲ್ ಮತ್ತು ಆಮಿ ಬೆರಾ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೆಟಿವ್ಗೆ ಆಯ್ಕೆ ಆಗಿದ್ದಾರೆ. ಜೊತೆಗೆ ಅನೇಕ ಭಾರತೀಯರು ರಾಜ್ಯಗಳ ಶಾಸನ ಸಭೆಗೂ ಆಯ್ಕೆ ಆಗಿ ಗಮನ ಸೆಳೆದಿದ್ದಾರೆ.
ಮಿಚಿಗನ್ನಿಂದ ಭಾರತೀಯ ಮೂಲದ ಅಮೆರಿಕನ್ ಉದ್ಯಮಿಯಾಗಿರುವ ರಾಜಕಾರಣಿ ಥಾಣೇಧರ್ ಆಯ್ಕೆಯಾಗಿದ್ದು, ಇಲ್ಲಿಂದ ಗೆಲುವು ಕಂಡ ಮೊದಲ ಭಾರತೀಯ ಅಮೆರಿಕನ್ ಪ್ರಜೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇವರು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮಾರ್ಟೆಕ್ ಬೈವಿಂಗ್ಸ್ ವಿರುದ್ಧ ಜಯ ಸಾಧಿಸಿದ್ದಾರೆ.
ಥಾಣೇದಾರ್ ಬೆಳಗಾವಿಯವರು: ಥಾಣೇದಾರ್ ಬೆಳಗಾವಿಯಲ್ಲಿ ಹುಟ್ಟಿ ಬೆಳೆದವರು. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಹಲವು ಕೆಲಸಗಳನ್ನು ಮಾಡಿ ಕುಟುಂಬ ನಿರ್ವಹಣೆ ಮಾಡಿದ್ದಾರೆ. ಅವರ ತಂದೆ 55 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿದಾಗ, 14 ವರ್ಷದ ಥಾಣೇದಾರ್ ತನ್ನ ಎಂಟು ಜನರ ಕುಟುಂಬವನ್ನು ಪೋಷಿಸಲು ಬೇರೆ ಬೇರೆ ಕೆಲಸಗಳನ್ನು ಮಾಡಬೇಕಾಯಿತು.
ಇಷ್ಟರ ನಡುವೆ 18 ನೇ ವಯಸ್ಸಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ಇವರು, ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1979 ರಲ್ಲಿ ಅಮೆರಿಕಕ್ಕೆ ಬಂದ ಇವರು ಅಕ್ರಾನ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡಿದರು. 1982 ರಲ್ಲಿ ಪಿಎಚ್‌ಡಿ ಪದವಿ ಪಡೆದುಕೊಂಡರು. 1988 ರಿಂದ ಅಮೆರಿಕ ಪ್ರಜೆಯಾದರು.
ರಾಜ ಕೃಷ್ಣಮೂರ್ತಿ (49) ನಾಲ್ಕನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಇವರು ರಿಪಬ್ಲಿಕನ್ ಪಕ್ಷದ ರಾರಿಸ್ ಡರ್ಗಿಸ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯ ಅಮೆರಿಕನ್ ರೊ ಖನ್ನಾ (46)ರ ರಿಪಬ್ಲಿಕನ್ ಪಕ್ಷದ ರಿತೇಶ್ ತಂಡೊನ್ ಅವರನ್ನು ಸೋಲಿಸಿದ್ದಾರೆ. ಚೈನ್ನೈ ಮೂಲದ ಪ್ರಮೀಳಾ ಜಯಪಾಲ್ ವಾಷಿಂಗ್ಟನ್ ರಾಜ್ಯದ 7ನೇ ಕಾಂಗ್ರೆಸ್ಸಿನಲ್ ಡಿಸ್ಟ್ರಿಕ್ಟ್ನಿಂದ ಆಯ್ಕೆ ಆಗಿ ಗಮನ ಸೆಳೆದಿದ್ದಾರೆ.
ಕಾಂಗ್ರೆಸ್ನಲ್ಲಿ ಧೀರ್ಘಕಾಲದಿಂದ ಸೇವೆ ಸಲ್ಲಿಸಿರುವ ಬೆರಾ (57) ರಿಪಬ್ಲಿಕನ್ ತಮಿಕ ಹಮಿಲ್ಟನ್ ಅವರನ್ನು ಸೋಲಿಸಿ ಗೆದ್ದು ಬೀಗಿದ್ದಾರೆ. ಈ ಹಿಂದಿನ ಸಂಸತ್ತಿನಲ್ಲೂ ಕೂಡ ಕೃಷ್ಣಮೂರ್ತಿ, ಖನ್ನಾ, ಜಯಪಾಲ್ ಮತ್ತು ಬೆರಾ ಸದಸ್ಯರರಾಗಿದ್ದರು. ಇದರ ಹೊರತಾಗಿ ಅನೇಕ ರಾಜ್ಯದಲ್ಲೂ ಭಾರತೀಯ ಅಮೆರಿಕ ಪ್ರಜೆಗಳು ಗೆಲುವು ಕಂಡಿದ್ದಾರೆ. ಮೆರಿಲ್ಯಾಂಡ್ನಲ್ಲಿ ಅರುಣ ಮಿಲ್ಲರ್ ಗೆದ್ದು ಇತಿಹಾಸ ಬರೆದಿದ್ದಾರೆ.
ಈ ನಡುವೆ ಭಾರತೀಯ ಅಮೆರಿಕನ್ ಆಗಿರುವ ಸಂದೀಪ್ ಶ್ರೀವಾತ್ಸವ ಟೆಕ್ಸಸ್ನಲ್ಲಿ ಸೋಲು ಕಂಡಿದ್ದಾರೆ. ಅಮೆರಿಕದ ಜನಸಂಖ್ಯೆಯಲ್ಲಿ ಭಾರತೀಯ ಮೂಲದ ಅಮೆರಿಕನ್ನರು ಶೇ. 1ರಷ್ಟಿದ್ದಾರೆ. ನವೆಂಬರ್ 8ರಂದು ನಡೆದ ಚುನಾವಣೆಗೆ ಮುನ್ನ ಡೆಮಾಕ್ರಟ್ಸ್ ಮತ್ತು ರಿಪಬ್ಲಿಕನ್ಸ್ ಎರಡೂ ಪಕ್ಷದವರು ಭಾರತೀಯ ಮೂಲದ ಅಮೆರಿಕನ್ ಮತದಾರರನ್ನು ಓಲೈಸಿದ್ದರು ಎಂಬುದು ಗಮನಾರ್ಹ.
ಇದನ್ನೂ ಓದಿ: ಅಮೆರಿಕ ಸಂಸತ್ನ ಸ್ಪೀಕರ್ ಆಗಿ ಮರು ಆಯ್ಕೆಯಾದ ಪೆಲೋಸಿ