ಸಿರ್ಮೌರ್(ಹಿಮಾಚಲಪ್ರದೇಶ): ಜಿಲ್ಲೆಯಲ್ಲಿ ನೋವಿನ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಭೂಕುಸಿತದಿಂದ ನಾಲ್ಕು ಮಕ್ಕಳು ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ರಾಸ್ಟ್ ಪಂಚಾಯತ್‌ನ ಖುಜರಾಡಿ ಗ್ರಾಮದಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಮತ್ತು ಭೂ ಕುಸಿತಗಳ ಸಂಭವಿಸುತ್ತಿವೆ. ನಿನ್ನೆ ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದೆ. ಮನೆಯಲ್ಲಿ ಮಲಗಿದ್ದ ನಾಲ್ವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಡ್ಡ ಕುಸಿದ ಮಾಹಿತಿ ತಿಳಿದ ಗ್ರಾಮಸ್ಥರು ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಲು ಯತ್ನಿಸಿದರು. ಆದ್ರೆ ಅಷ್ಟರಲ್ಲಾಗಲೇ 5 ಮಂದಿ ಸಾವನ್ನಪ್ಪಿದ್ದರು. ಎಸ್‌ಡಿಎಂ ಶಿಲ್ಲೈ ಸುರೇಶ್ ಸಿಂಘಾ ನಡೆದ ದುರ್ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಮೃತ ಕುಟುಂಬಸ್ಥರಿಗೆ ಸ್ಥಳದಲ್ಲೇ ಪರಿಹಾರ ನೀಡುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.
ಭೂಕುಸಿತದಿಂದ ಸಾವು: ಮೃತರನ್ನು ಪ್ರದೀಪ್ ಸಿಂಗ್ ಪತ್ನಿ ಮಮತಾ (27), ಮಕ್ಕಳಾದ ಇಶಿತಾ (8), ಅಲಿಶಾ (6), ಐರಾಂಗ್ (2) ಮತ್ತು ತುಳಸಿ ರಾಮ್ ಪುತ್ರಿ ಆಕಾನ್ಶಿಕಾ (7) ಎಂದು ಗುರುತಿಸಲಾಗಿದೆ. ಆದರೆ ಪ್ರದೀಪ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿಮಾಚಲದಲ್ಲಿ ಮಳೆಯ ಬಗ್ಗೆ ಎಚ್ಚರಿಕೆ: ಹಿಮಾಚಲ ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ರಾಜ್ಯದಲ್ಲಿ 4 ದಿನಗಳ ಕಾಲ ವರುಣನ ಆರ್ಭಟ ಸಾಗಲಿದ್ದು, ಇಂದು ರಾಜ್ಯದಲ್ಲಿ ಭಾೀರಿ ಮಳೆಯಾಗುತ್ತಿದೆ. ಹೀಗಾಗಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಲಾಹೌಲ್-ಸ್ಪಿತಿ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆಯ ಮುನ್ಸೂಚನೆ ನೀಡಲಾಗಿದೆ. ಶಿಮ್ಲಾ, ಸಿರ್ಮೌರ್, ಚಂಬಾ, ಕಾಂಗ್ರಾ ಮತ್ತು ಮಂಡಿ ಜಿಲ್ಲೆಗಳಲ್ಲಿ ಪ್ರವಾಹದ ಬಗ್ಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಓದಿ: ಅರುಣಾಚಲ ಪ್ರದೇಶದಲ್ಲಿ ಭೂಕುಸಿತ.. ಪ್ರವಾಹದಲ್ಲಿ ಕೊಚ್ಚಿ ಹೋದ ವಾಹನಗಳು: ವಿಡಿಯೋ