ರಾಂಚಿ (ಜಾರ್ಖಂಡ್): ನಗರದಿಂದ 70 ಕಿ.ಮೀ ದೂರದ ಪಿಸ್ಕಾ ಗ್ರಾಮದಲ್ಲಿ ಬಾವಿಯೊಳಗೆ ಬಿದ್ದ ಗೂಳಿ ತೆಗೆಯಲು ಹೋಗಿ 5 ಜನರು ಮೃತಪಟ್ಟ ಘಟನೆ ಇಂದು (ಗುರುವಾರ) ಸಂಜೆ ನಡೆದಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮಣ್ಣಿನ ಬಾವಿಯೊಳಗೆ ಗೂಳಿ ಬಿದ್ದಿದೆ. ಹೊರತೆಗೆಯಲು ನಾಲ್ಕು ಮಂದಿ ಬಾವಿಗಿಳಿದಿದ್ದರು. ಮೇಲಿದ್ದ ಉಳಿದ ನಾಲ್ವರು ಹಗ್ಗದ ಮೂಲಕ ಗೂಳಿಯನ್ನು ಮೇಲಕ್ಕೆತ್ತುವುದರಲ್ಲಿ ನಿರತರಾಗಿದ್ದರು. ಅಷ್ಟರಲ್ಲಿ ಬಾವಿಯ ಮಣ್ಣು ದಿಢೀರ್ ಕುಸಿಯಿತು. ಗೂಳಿ ಸೇರಿ ನಾಲ್ಕು ಜನ ಮಣ್ಣಿನಡಿ ಸಿಲುಕಿದರು. ಒಬ್ಬ ವ್ಯಕ್ತಿ ಸೊಂಟದವರೆಗೆ ಮಣ್ಣಿನಲ್ಲಿ ಹೂತು ಹೋಗಿದ್ದ. ಆತನನ್ನು ಹರಸಾಹಸಪಟ್ಟು ರಕ್ಷಿಸಲಾಗಿದೆ. ಕತ್ತಲೆ ಆವರಿಸಿದ್ದು ಉಳಿದವರನ್ನು ಹೊರತೆಗೆಯುವ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಸಿಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಸುದೇಶ್ ಮಹತೋ, "ಬಾವಿಯೊಳಗೆ ಬಿದ್ದ ಗೂಳಿ ತೆಗೆಯಲು ಹೋಗಿದ್ದ ನಾಲ್ವರು ಮಣ್ಣಿನಲ್ಲಿ ಸಿಲುಕಿಕೊಂಡು ಮೃತಪಟ್ಟಿರುವ ಸುದ್ದಿ ಕೇಳಿ ಬಹಳ ದು:ಖವಾಗಿದೆ. ಈ ಘಟನೆ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡಲಾಗುವುದು" ಎಂದು ತಿಳಿಸಿದರು.
ಮುಗಿಲು ಮುಟ್ಟಿದ ಅಕ್ರಂದನ: ಘಟನಾ ಸ್ಥಳದಲ್ಲಿ ಮಣ್ಣಿನಡಿ ಸಿಲುಕಿ ಸಾವಿಗೀಡಾದವರ ಕುಟುಂಬಗಳ ಅಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂಓದಿ: Bengaluru crime: ವೃದ್ಧೆಗೆ 3.5 ಕೋಟಿ ರೂಪಾಯಿ ವಂಚನೆ; ನಾಲ್ವರ ಬಂಧನ