ಅಮರಾವತಿ (ಮಹಾರಾಷ್ಟ್ರ): ಹಳೆ ಕಟ್ಟಡವೊಂದು ಕುಸಿದು ಬಿದ್ದು ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಐವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ನಡೆದಿದೆ.
ಇಲ್ಲಿನ ಪ್ರಭಾತ್ ಚೌಕ್ ಪ್ರದೇಶದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಹಳೆ ಕಟ್ಟಡ ಕುಸಿತದಿಂದ ನೆಲ ಮಹಡಿಯಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಐವರು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರ ಮೃತದೇಹಗಳು ತಕ್ಷಣಕ್ಕೆ ಪತ್ತೆಯಾಗಿವೆ.
ಈ ಘಟನೆಯ ವಿಷಯ ತಿಳಿದ ಅಮರಾವತಿ ಸಂಸದೆ ನವನೀತ್ ರಾಣಾ, ಅಮರಾವತಿ ಮಾಜಿ ಮೇಯರ್ ಮಿಲಿಂದ್ ಚಿಮೋಟೆ, ವಿಲಾಸ್ ಇಂಗೋಲ್, ಕಾಂಗ್ರೆಸ್ ನಗರಾಧ್ಯಕ್ಷ ಬಬ್ಲು ಶೇಖಾವತ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ನೆಲಸಮಗೊಳಿಸಬೇಕು ಹಾಗೂ ಈ ಕಟ್ಟಡದಲ್ಲಿರುವ ಕೆಲಸಗಾರರನ್ನು ತೆರವು ಮಾಡಬೇಕೆಂದು ನಗರಸಭೆ ಸತತ ಏಳು ವರ್ಷಗಳಿಂದ ಕೇವಲ ನೋಟಿಸ್ ಜಾರಿ ಮಾಡುತ್ತಿದೆ. ಆದರೆ, ಈ ಕುರಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಮಿಜೋರಾಂನಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಫೋಟ: 4 ಸಾವು, 18 ಮಂದಿಗೆ ಗಾಯ