ಭೋಪಾಲ್ (ಮಧ್ಯಪ್ರದೇಶ): ಮದುವೆಗೆ ವರ ಸೇರಿ ಸುಮಾರು 42 ಜನರನ್ನು ಕರೆದೊಯ್ಯುತ್ತಿದ್ದ ಮಿನಿ ಟ್ರಕ್ವೊಂದು ಪಲ್ಪಿ ಹೊಡೆದು ಐವರು ಸಾವನ್ನಪ್ಪಿ, 36 ಜನರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ನಡೆದಿದೆ. ಗಾಯಾಳುಗಳಲ್ಲಿ ಸುಮಾರು 10 ಜನರ ಪರಿಸ್ಥಿತಿ ಗಂಭೀರವಾಗಿದೆ. ವರ ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ರಾತ್ರಿ ಇಲ್ಲಿನ ದೋಲಾರ್ ಗ್ರಾಮದಿಂದ ದೋಲ್ ಗ್ರಾಮಕ್ಕೆ ಮದುವೆ ಸಮಾರಂಭಕ್ಕೆ ಮಿನಿ ಟ್ರಕ್ನಲ್ಲಿ ವರ ಹಾಗೂ ಕುಟುಂಬಸ್ಥರು, ಸಂಬಂಧಿಕರು ತೆರಳುತ್ತಿದ್ದರು. ಆದರೆ, ಚಾಲಕ ವಾಹನವನ್ನು ವೇಗವಾಗಿ ಚಲಾಯಿಸಿದ ಪರಿಣಾಮ ಆತನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಇದರಿಂದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಉಳಿದ 36 ಜನ ಗಾಯಾಳುಗಳ ಪೈಕಿ 10 ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಅಪಾರ್ಟ್ಮೆಂಟ್ ನಲ್ಲಿ ಡ್ರಗ್ಸ್ ಪಾರ್ಟಿ ಶಂಕೆ: ವಿದೇಶಿ ಪ್ರಜೆಗಳು ಸೇರಿ ಯುವತಿ - ಯುವಕ ಅಂದರ್