ನವದೆಹಲಿ : ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ ಆರ್ಥಿಕತೆಯಲ್ಲಿ ಚೇತರಿಕೆ ಕಾಣುತ್ತಿದ್ದು, ದೇಶದ ಜಿಡಿಪಿ 2022ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಅವಧಿಯಲ್ಲಿ ಶೇಕಡಾ 7ರಷ್ಟಕ್ಕಿಂತ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೇವಾ ವಲಯದಲ್ಲಿ ಚಟುವಟಿಕೆಗಳ ಏರಿಕೆ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಮತ್ತು ಮೂಲಸೌಕರ್ಯಗಳಿಗೆ ಸರ್ಕಾರದ ವೆಚ್ಚ ಏರಿಕೆ ಕಾರಣದಿಂದ ದೇಶದ ಜಿಡಿಪಿ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಕೋವಿಡ್ ಮಾರ್ಗಸೂಚಿಗಳನ್ನು ಸಡಿಲಗೊಳಿಸಿರುವುದು ಮತ್ತು ವ್ಯಾಕ್ಸಿನೇಷನ್ ಪ್ರಮಾಣವನ್ನು ತೀವ್ರಗೊಳಿಸಿರುವುದು ಜನರಲ್ಲಿ ಆಶಾಭಾವನೆ ಮೂಡಿಸಿದ್ದು, ಆರ್ಥಿಕತೆ ಚೇತರಿಕೆ ಕಾಣಲು ಕಾರಣವಾಗಿದೆ. ಜುಲೈನಿಂದ ಸೆಪ್ಟೆಂಬರ್ವರೆಗೆ ಆದ ಮಳೆಯು ಕೃಷಿ ಉತ್ಪಾದನೆ ಏರಿಕೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಆದರೂ ಕೂಡಾ ಹೆಚ್ಚುತ್ತಿರುವ ಇಂಧನ ಬೆಲೆ ಮತ್ತು ಸರಕು ಸಾಗಣೆ ವೆಚ್ಚಗಳು ಜಿಡಿಪಿ ಮೇಲೆ ದುಷ್ಪರಿಣಾಮ ಬೀರಲಿವೆ ಎಂದು ಅಂದಾಜಿಸಲಾಗಿದೆ. ಇಂದು (ನವೆಂಬರ್ 30) 2022ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಅಧಿಕೃತ ಜಿಡಿಪಿಯನ್ನು ಸರ್ಕಾರ ಬಿಡುಗಡೆ ಮಾಡಲು ನಿರ್ಧರಿಸಿದೆ.
ಕೋವಿಡ್ಗೂ ಮೊದಲಿನ ವೇಳೆಗೆ ಹೋಲಿಕೆ ಮಾಡಿದರೆ 2022ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕ ಸ್ಥಿತಿ ಚೇತರಿಕೆ ಕಂಡಿದೆ. ಮೊದಲ ತ್ರೈಮಾಸಿಕಕ್ಕಿಂತ ಈ ತ್ರೈಮಾಸಿಕದಲ್ಲಿ ಗಮನಾರ್ಹ ಸುಧಾರಣೆಯಾಗಿದೆ ಎಂದು ಇನ್ವೆಸ್ಟ್ಮೆಂಟ್ ಇನ್ಫಾರ್ಮೆಷನ್ ಅಂಡ್ ಕ್ರೆಡಿಟ್ ರೇಟಿಂಗ್ ಏಜನ್ಸಿ ಆಫ್ ಇಂಡಿಯಾ ಲಿಮಿಟೆಡ್ನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 9ರಷ್ಟು ಜಿಡಿಪಿಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಆದರೆ ಹಣದುಬ್ಬರ ಸಂಬಂಧಿ ವಿಚಾರಗಳು ಜಿಡಿಪಿ ಮೇಲೆ ಈ ಬಾರಿ ದುಷ್ಪರಿಣಾಮ ಬೀರಲಿವೆ ಎಂದು ಎಂಕೆ ಗ್ಲೋಬಲ್ ಫೈನಾನ್ಶಿಯಲ್ ಸರ್ವೀಸಸ್‌ನ ಪ್ರಮುಖ ಅರ್ಥಶಾಸ್ತ್ರಜ್ಞೆ ಮಾಧವಿ ಅರೋರಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ರಿಲಯನ್ಸ್ ಕ್ಯಾಪಿಟಲ್ನ ಆಡಳಿತ ಮಂಡಳಿ ರದ್ದು ಮಾಡಿದ ಆರ್ಬಿಐ: ಆಡಳಿತಾಧಿಕಾರಿ ನೇಮಕ