ಭವನಗರ : ಗುಜರಾತ್‌ನ ಭಾವನಗರ ಪಟ್ಟಣದ ಹೋಟೆಲ್ ಕಮ್ ಕೋವಿಡ್ ಆರೈಕೆ ಕೇಂದ್ರದಲ್ಲಿ ಬುಧವಾರ ಬೆಳಗಿನ ಜಾವ ಬೆಂಕಿ ಕಾಣಿಸಿದ್ದು, ಯಾರಿಗೂ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಜನರೇಷನ್ ಎಕ್ಸ್ ಹೋಟೆಲ್"ನ 3ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಯಲ್ಲಿದ್ದ ಒಟ್ಟು 61 ಕೊರೊನಾ ಸೋಂಕಿತರನ್ನು ಬೇರೆಡೆಗೆ ಸ್ಥಳಾಂತರಗೊಳಿಸಲಾಗಿದೆ. ಬೆಂಕಿ ಕಾಣಿಸಿಕೊಂಡ ವೇಳೆ 68 ರೋಗಿಗಳು ಕೋವಿಡ್ ಆರೈಕೆ ಕೇಂದ್ರದಲ್ಲಿದ್ದರು ಎನ್ನಲಾಗಿದೆ.
ಸದ್ಯ 61 ಜನರನ್ನು ಸ್ಥಳಾಂತರ ಮಾಡಲಾಗಿದೆ. ಉಳಿದ ಏಳು ಮಂದಿಯನ್ನು ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿದ್ದರಿಂದ ಯಾವುದೇ ಹಾನಿಯಾಗಿಲ್ಲ. ತಕ್ಷಣವೇ ಬೆಂಕಿ ನಂದಿಸಲಾಗಿದೆ.
ರೋಗಿಗಳನ್ನು ಇರಿಸಲಾಗಿರುವ ಮೂರನೇ ಮಹಡಿಯ ಟಿವಿಯೊಂದರಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದರಿಂದ ಹೊಗೆ ಆವರಿಸಿದೆ ಎಂದು ಭಾವನಗರ ಅಗ್ನಿಶಾಮಕ ದಳದ ಹಿರಿಯ ಅಗ್ನಿಶಾಮಕ ಅಧಿಕಾರಿ ಭರತ್ ಕನಡ ತಿಳಿಸಿದ್ದಾರೆ.