ಅಮೃತಸರ: ಶಸ್ತ್ರಾಸ್ತ್ರವನ್ನು ಹಿಡಿದು ಫೋಟೋಗೆ ಫೋಸ್ ನೀಡಿದ 10 ವರ್ಷದ ಬಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ. ಅಮೃತಸರ ಪೊಲೀಸರು ಬಂದೂಕು ಸಂಸ್ಕೃತಿ ಉತ್ತೇಜಿಸಿದ್ದಕ್ಕಾಗಿ ಮಗು, ಆತನ ತಂದೆ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಫೋಟೋವನ್ನ ನನ್ನ ಮಗ 4 ವರ್ಷದವನಿದ್ದಾಗ ತೆಗೆದದ್ದು ಎಂದು ಬಾಲಕನ ತಂದೆ ಹೇಳಿದ್ದಾರೆ.
ಫೇಸ್‌ಬುಕ್‌ನಲ್ಲಿ ಫೋಟೋ ಹಂಚಿಕೊಂಡ ತಂದೆ: ಮಾಹಿತಿ ಪ್ರಕಾರ, ಕಥುನಂಗಲ್ ಪೊಲೀಸ್ ಠಾಣೆಯಲ್ಲಿ 10 ವರ್ಷದ ಮಗುವಿನ ವಿರುದ್ಧ ಪ್ರಕರಣವನ್ನು ದಾಖಲು ಮಾಡಲಾಗಿದೆ. ಮಗುವಿನ ತಂದೆ ಅವರ ಮಗ ಗನ್ ಹಿಡಿದು ನಿಂತಿರುವ ಫೋಟೋವನ್ನು ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಪೊಲೀಸರ ಸೈಬರ್ ಸೆಲ್ ಗಮನಕ್ಕೆ ಬಂದಿದೆ. ತನಿಖೆಯ ನಂತರ, ಪೊಲೀಸರು ಮಗುವಿನ ತಂದೆಯನ್ನು ಪತ್ತೆಹಚ್ಚಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿ ದಾಳಿ ಮಾಡಿದರೆ ಕೊಂದೇ ಬಿಡುವೆ.. ಏರ್ಗನ್ ಪ್ರದರ್ಶಿಸಿದ ವ್ಯಕ್ತಿ ವಿರುದ್ಧ ಕೇಸ್
ಬಂದೂಕು ಸಂಸ್ಕೃತಿ ವಿರುದ್ಧ ಕಠಿಣ ಕ್ರಮ: ಪಂಜಾಬ್ ಸಿಎಂ ಭಗವಂತ್ ಮಾನ್ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಬಂದೂಕು ಸಂಸ್ಕೃತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮುಂದಿನ 3 ತಿಂಗಳಲ್ಲಿ ಇದುವರೆಗೆ ನೀಡಲಾದ ಎಲ್ಲ ಬಂದೂಕು ಪರವಾನಗಿಗಳನ್ನು ಸಂಪೂರ್ಣ ಪರಿಶೀಲಿಸುವಂತೆ ಸೂಚಿಸಿದ್ದಾರೆ.
ಇದರೊಂದಿಗೆ ಹೊಸ ಬಂದೂಕು ಪರವಾನಗಿ ನೀಡುವುದನ್ನು ಕೂಡ ನಿಷೇಧಿಸಲಾಗಿದೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಆಯುಧಗಳ ಪ್ರದರ್ಶನವನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಾಜ್ಯದಲ್ಲಿ ದಿಢೀರ್ ತಪಾಸಣೆ ನಡೆಸುವಂತೆ ಪೊಲೀಸರಿಗೂ ಆದೇಶ ನೀಡಲಾಗಿದೆ.