ಮುಂಬೈ: ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಭ್ರಷ್ಟಾಚಾರ ಆರೋಪ ಹೊರಿಸಿ ನೀಡಿರುವ ದೂರಿಗೆ ಸಂಬಂಧಪಟ್ಟಂತೆ ನಗರದ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ವಿದರ್ಭ ಅಕೋಲಾ ನಗರದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪರಂಬೀರ್ ಸಿಂಗ್, ಡಿಸಿಪಿ ಪರಾಗ್ ಮಾನೆರೆ ಮತ್ತು ಇತರ 26 ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇವರ ವಿರುದ್ಧ ಅಪರಾಧಕ್ಕೆ ಸಂಚು, ಸಾಕ್ಷ್ಯಗಳ ನಾಶ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ ಕಾಯ್ದೆ), 1989 ರ ವಿವಿಧ ಸೆಕ್ಷನ್ಗಳಡಿ ದೂರು ದಾಖಲಿಸಲಾಗಿದೆ.
ಕೋಟ್ವಾಲಿ ಪೊಲೀಸರು ಝೀರೋ ಎಫ್ಐಆರ್ (ನಿಗದಿತ ಪ್ರದೇಶ ಮತ್ತು ಅಪರಾಧವನ್ನು ಉಲ್ಲೇಖಿಸದೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವ ವಿಧಾನ) ದಾಖಲಿಸಿದ್ದಾರೆ ಮತ್ತು ಅದನ್ನು ಥಾಣೆ ನಗರ ಪೊಲೀಸರಿಗೆ ವರ್ಗಾಯಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಥಾಣೆ ಪೊಲೀಸ್ ಠಾಣೆಗೆ ನಿಯೋಜನೆಗೊಂಡಿದ್ದ ವೇಳೆ ಪರಂಬೀರ್ ಸಿಂಗ್ ಮತ್ತು ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದರು ಎಂದು ಭೀಮರಾವ್ ಘಡ್ಜ್ ಎಂಬ ಪೊಲೀಸ್ ಇನ್ಸ್ಪೆಕ್ಟರ್ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.
2015-2018 ರ ಅವಧಿಯಲ್ಲಿ ಥಾಣೆ ಪೊಲೀಸ್ ಕಮಿಷನರೇಟ್ನಲ್ಲಿ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಆಯುಕ್ತ ಪರಂಬೀರ್ ಸಿಂಗ್ ನೇತೃತ್ವದಲ್ಲಿ ಹಲವು ಅಧಿಕಾರಿಗಳು ವಿವಿಧ ಭ್ರಷ್ಟಾಚಾರ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಘಡ್ಜ್ ಆರೋಪಿಸಿದ್ದಾರೆ. ಎಫ್‌ಐಆರ್ ದಾಖಲಾಗಿರುವ ಕೆಲವು ವ್ಯಕ್ತಿಗಳ ವಿರುದ್ಧ ಚಾರ್ಜ್‌ಶೀಟ್ ಹಾಕದಂತೆ ಸಿಂಗ್ ತನ್ನ ಕಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸ್ ಆಯುಕ್ತರ ಭ್ರಷ್ಟಾಚಾರಕ್ಕೆ ಸಾಥ್ ನೀಡದ ಹಿನ್ನೆಲೆ ನನ್ನ ವಿರುದ್ಧ ಐದು ಎಫ್ಐಆರ್ ದಾಖಲಿಸಿ ಅಮಾನತು ಮಾಡಲಾಗಿತ್ತು ಎಂದು ಈಗ ಅಕೋಲಾ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇನ್ಸ್ಪೆಕ್ಟರ್ ಘಡ್ಜ್ ಹೇಳಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಪರಂಬೀರ್ ಸಿಂಗ್ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಸಿಂಗ್ ಆರೋಪ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಬಳಿಕ, ಪ್ರಕರಣವನ್ನು ಹೈಕೋರ್ಟ್ ಸಿಬಿಐ ತನಿಖೆಗೆ ವಹಿಸಿತ್ತು. ಈ ಕಾರಣಕ್ಕಾಗಿ ಅನಿಲ್ ದೇಶ್ಮುಖ್ ತನ್ನ ಸಚಿವ ಸ್ಥಾನ ಕಳೆದುಕೊಂಡು ತನಿಖೆ ಎದುರಿಸುತ್ತಿದ್ದಾರೆ.