ಬೆಂಗಳೂರು : ಪತ್ನಿ ಹಾಗೂ ಆಕೆಯ ಮಗಳ ಮೇಲೆ ವಿಕೃತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸಬ್ ಇನ್ಸ್ಪೆಕ್ಟರ್ ವಿರುದ್ಧ ಜೆ.ಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ನಿವಾಸಿ 37 ವರ್ಷದ ಸಂತ್ರಸ್ತೆ ನೀಡಿರುವ ದೂರಿನನ್ವಯ ಆಕೆಯ ಪತಿ ಬೆಂಗಳೂರು ಗ್ರಾಮಾಂತರ ಎಸ್‌ಪಿ ಕಚೇರಿಯ ಪಿಎಸ್‌ಐ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದೂರುದಾರ ಮಹಿಳೆಗೆ 2005ರಲ್ಲಿ ವಿವಾಹವಾಗಿದ್ದು, 17 ಹಾಗೂ 13 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ಶಿವಾಜಿನಗರ ಮಹಿಳಾ ಠಾಣೆಗೆ ಮಹಿಳೆ ದೂರು ನೀಡಲು ತೆರಳಿದ್ದರು. ಈ ವೇಳೆ ಮಹಿಳೆಗೆ ಸಬ್ ಇನ್ಸ್ಪೆಕ್ಟರ್ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ 'ನಿನ್ನನ್ನು ವಿವಾಹವಾಗಿ, ಮಕ್ಕಳಿಗೂ ಒಳ್ಳೆಯ ವಿದ್ಯಾಭ್ಯಾಸ ಕೊಡುವುದಾಗಿ' ಪಿಎಸ್ಐ ಭರವಸೆ ನೀಡಿದ್ದನಂತೆ. ಈ ಮಾತಿಗೆ ಮರುಳಾದ ಮಹಿಳೆ 2012ರಲ್ಲಿ ಆರೋಪಿಯನ್ನು ವಿವಾಹವಾಗಿದ್ದಳು.
ಓದಿ: ಲಿಫ್ಟ್‌ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕ.. ವಿಡಿಯೋ
ಕೆಲ ತಿಂಗಳ ಬಳಿಕ ದೂರುದಾರ ಮಹಿಳೆ ಗರ್ಭಿಣಿಯಾಗಿದ್ದು, ಆ ವೇಳೆ ಆಕೆಯ ಸಹೋದರಿ ಜತೆ ಪಿಎಸ್ಐ ಸಲುಗೆ ಬೆಳೆಸಿದ್ದನಂತೆ. ಈ ಬಗ್ಗೆ ದೂರುದಾರ ಮಹಿಳೆ ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡು ಆಕೆ ಮೇಲೆ ಹಲ್ಲೆ ನಡೆಸುತ್ತಿದ್ದನಂತೆ. ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿ ಕ್ರೌರ್ಯ ತೋರುತ್ತಿದ್ದ ಆತ ಅಶ್ಲೀಲ ಚಿತ್ರಗಳನ್ನು ನೋಡುತ್ತಾ ಅದರಲ್ಲಿರುವಂತೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಗರ್ಭಿಣಿಯಾಗಿರುವಾಗ ಪತಿ ಹಲ್ಲೆ ನಡೆಸಿದ ಪರಿಣಾಮ ಗರ್ಭಪಾತವಾಗಿತ್ತು. ದೂರುದಾರ ಮಹಿಳೆಯ 13 ವರ್ಷದ ಮಗಳ ಮೇಲೂ ವಿಕೃತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿ ಪೊಲೀಸ್ ಆಗಿರುವ ಕಾರಣ ಅನೇಕ ಮಂದಿ ನನಗೆ ಸಹಾಯ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ.