ಅಲಿಗಢ(ಉತ್ತರ ಪ್ರದೇಶ): ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತವರು ನಾಡಿನಲ್ಲಿ ಅತ್ಯಂತ ಅಮಾನವೀಯ, ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ಮೇಲೆ ಚಿಕ್ಕಂದಿನಿಂದಲೂ ಅತ್ಯಾಚಾರ ನಡೆದಿದ್ದು, ಬರೋಬ್ಬರಿ 32 ವರ್ಷದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?: ಬಾಲಕಿ ಎರಡೂವರೆ ವರ್ಷದವಳಿದ್ದಾಗ ರಸ್ತೆ ಅಪಘಾತದಲ್ಲಿ ತಂದೆಯನ್ನು ಕಳೆದುಕೊಳ್ಳುತ್ತಾಳೆ. ಇದರ ಬೆನ್ನಲ್ಲೇ ವಿಧವೆ ತಾಯಿ ವ್ಯಕ್ತಿಯೊಬ್ಬನ ಜೊತೆ ಪ್ರೇಮ ವಿವಾಹ ಮಾಡಿಕೊಳ್ಳುತ್ತಾರೆ. ತಬ್ಬಲಿಯಾಗುವ ಬಾಲಕಿ ಏಳು ವರ್ಷದವಳಾಗಿದ್ದ ಸಂದರ್ಭದಲ್ಲಿ ಮಲ ತಂದೆಯಿಂದ ಅತ್ಯಾಚಾರಕ್ಕೊಳಗಾಗುತ್ತಾಳೆ.
ತುಂಬಾ ದಿನಗಳವರೆಗೆ ಇದು ಮುಂದುವರೆಯುತ್ತದೆ. ಇದರ ಮಧ್ಯೆ ಸಂತ್ರಸ್ತೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಈ ತಾಯಿ ಮುಂದೆ ಹೇಳಿಕೊಂಡಿದ್ದಾಳೆ. ಈ ವೇಳೆ ಮಾತ್ರೆ ನೀಡಿ, ಯಾರಿಗೂ ಹೇಳದಂತೆ ಸುಮ್ಮನಿರಲು ತಿಳಿಸಿದ್ದಾರೆ.
ಇನ್ನು, 2011ರಲ್ಲಿ ಯುವತಿ ಮದುವೆ ಮಾಡಿಕೊಳ್ಳುವವರೆಗೂ ಇದು ಮುಂದುವರೆದಿತ್ತು. 2011ರಲ್ಲಿ ಸಂತ್ರಸ್ತೆ ಅಲಿಘರ್ನ ಯೋಧನೊಂದಿಗೆ ಮದುವೆ ಮಾಡಿಕೊಳ್ಳುತ್ತಾರೆ. ಸದ್ಯ ಸಂತ್ರಸ್ತೆಗೆ ಇಬ್ಬರು ಮಕ್ಕಳಿದ್ದಾರೆ. ಪತಿ ವಿಆರ್ಎಸ್ ತೆಗೆದುಕೊಂಡು ಅಲಿಘರ್ನಲ್ಲಿ ವ್ಯಾಪಾರ ಪ್ರಾರಂಭಿಸುತ್ತಾರೆ. ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗ್ತಿತ್ತು.
ಇದನ್ನೂ ಓದಿ: ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೊಳಗಾದ ಬಾಲಕಿ: ಗರ್ಭಿಣಿಯಾಗ್ತಿದ್ದಂತೆ ಬೆಳಕಿಗೆ ಬಂದ ಪ್ರಕರಣ
ತವರು ಮನೆಗೆ ಹೋಗುವಂತೆ ಗಂಡ ಹೇಳಿದಾಗಲೆಲ್ಲ ಪತ್ನಿ ನಿರಾಕರಿಸುತ್ತಿದ್ದರು. ಆದರೆ, 2019ರಲ್ಲಿ ಸಹೋದರನೊಂದಿಗೆ ತಾಯಿ ಮನೆಗೆ ಹೋಗಿದ್ದರು. ಈ ವೇಳೆ ಹಿಂದಿನ ಘಟನೆ ಪುನರಾವರ್ತನೆಯಾಗಿದೆ. ಈ ವೇಳೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಆಕೆಯ ಮೇಲೆ ಹಲ್ಲೆ ಸಹ ನಡೆಸಲಾಗಿದೆ. ಜೊತೆಗೆ ವೈವಾಹಿಕ ಜೀವನ ಹಾಳು ಮಾಡಿ, ಪತಿಯನ್ನು ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದ್ದಾರೆ. ತನ್ನ ಮೇಲೆ ನಡೆದ ಕೃತ್ಯದ ಬಗ್ಗೆ ಗಂಡನ ಮುಂದೆ ಹೇಳಿಕೊಂಡಿದ್ದಾರೆ.
ಗಂಡನಿಂದ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಅಧಿಕಾರಿಗಳಿಗೆ ಪತ್ರ ಬರೆದು ವಿಷಯ ತಿಳಿಸಿದ್ದಾರೆ. ಎಲ್ಲವೂ ನಡೆದ ಬಳಿಕ ಅಲಿಗಢ ಪೊಲೀಸ್ ಠಾಣೆಯಲ್ಲಿ ಇದೀಗ ಸಂತ್ರಸ್ತೆ ದೂರು ನೀಡಿದ್ದಾರೆ. ಅಂದರೆ ಬರೋಬ್ಬರಿ 32 ವರ್ಷಗಳ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಮಹಿಳೆಯ ಚಿಕ್ಕಪ್ಪ, ತಾಯಿ ಸೇರಿದಂತೆ ಕೆಲವರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.