ಹೈದರಾಬಾದ್: ಕತಾರ್ನಲ್ಲಿ ನಡೆದ ಫಿಫಾ ವಿಶ್ವಕಪ್ 2022 ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ಪೆನಾಲ್ಟಿ ಶೂಟ್ನಲ್ಲಿ ರೋಚಕ ಜಯ ದಾಖಲಿಸಿತು. ಈ ಮೂಲಕ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಬಳಗ ದೇಶಕ್ಕೆ ಮೂರನೇ ಬಾರಿಗೆ ಫುಟ್ಬಾಲ್ ವಿಶ್ವಕಪ್ ಕಿರೀಟ ತೊಡಿಸಿತು.
ಇಲ್ಲಿಯ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಫುಟ್ಬಾಲ್ ಫೈನಲ್ ಪಂದ್ಯ ವೀಕ್ಷಣೆಗಾಗಿ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ನಟ, ನಟಿಯರು ಆಗಮಿಸಿದ್ದರು. ಅಲ್ಲದೇ ಬಾಲಿವುಡ್ನ ಖ್ಯಾತ ನಟಿ ದೀಪಿಕಾ ಪಡಕೋಣೆ ಅವರು ಫಿಫಾ ವಿಶ್ವಕಪ್ ಫೈನಲ್ ಟ್ರೋಫಿಯನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು. ಟ್ರೋಫಿ ಅನಾವರಣ ಸಮಯದಲ್ಲಿ ದೀಪಿಕಾ, ಕಪ್ಪು ಮತ್ತು ಕಡು ಕೇಸರಿ ಬಣ್ಣದ ಡ್ರೆಸ್ ಧರಿಸಿದರೆ, ಪತಿ ರಣವೀರ್ ಸಿಂಗ್ ಅಂತಾರಾಷ್ಟ್ರೀಯ ಬ್ರ್ಯಾಂಡ್ ಗುಸ್ಸಿ ಸ್ಪೋರ್ಟ್ಸ್ ಲುಕ್‌ನಲ್ಲಿ ಕಾಣಿಸಿಕೊಂಡರು. ದೀಪ್ವೀರ್ ದಂಪತಿ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಬೆಂಬಲಿಸಿದರು.
ಫಿಫಾ ವಿಶ್ವಕಪ್ ಪ್ರಶಸ್ತಿ ಸಮರದಲ್ಲಿ 90 ನಿಮಿಷಗಳ ನಂತರವೂ ಯಾವುದೇ ಗೆಲುವಿನ ನಿರ್ಧಾರ ಬಾರದಿದ್ದಾಗ ಐದು ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿತ್ತು. ಅದರಲ್ಲೂ ಉಭಯ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದವು. ನಂತರ, 30 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಯಿತು. ಇದರಲ್ಲಿ ಮೆಸ್ಸಿ, ಪಂದ್ಯದ 25 ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಅರ್ಜೆಂಟೀನಾದ ಗೆಲುವಿನ ಭರವಸೆಯನ್ನು ಹೆಚ್ಚಿಸಿದರು.
ಇನ್ನು, ಫ್ರಾನ್ಸ್ ಪರ ಕ್ಯಾಪ್ಟನ್ ಕೈಲಿನ್ ಎಂಬಪ್ಪೆ ಹೋರಾಟ ನಡೆಸಿ, 30 ನಿಮಿಷಗಳ ಹೆಚ್ಚುವರಿ ಆಟದ 28ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಪಂದ್ಯವನ್ನು ಸಮಬಲಗೊಳಿಸಿದರು. ಎರಡೂ ತಂಡಗಳು ಸಮಾನ ಸಂಖ್ಯೆಯ ಗೋಲುಗಳನ್ನು ಗಳಿಸಿದ ನಂತರ, ನಿಯಮಗಳ ಪ್ರಕಾರ ಪೆನಾಲ್ಟಿ ಶೂಟೌಟ್ ಮೂಲಕ ಪಂದ್ಯವನ್ನು ಪುನಾರಂಭಿಸಲಾಯಿತು.
ಫ್ರಾನ್ಸ್ ಪರ ನಾಯಕ ಎಂಬಪ್ಪೆ ಮೊದಲ ಗೋಲು ದಾಖಲಿಸಿದರು. ಇದೇ ವೇಳೆ ಅರ್ಜೆಂಟೀನಾ ಪರವಾಗಿ ನಾಯಕ ಮೆಸ್ಸಿ ಮೈದಾನದಲ್ಲಿ ಭರ್ಜರಿ ಗೋಲು ಬಾರಿಸಿದರು. ಬಳಿಕ ಫ್ರಾನ್ಸ್ ಪರ ಎರಡು ಕಿಕ್ಗಳನ್ನು ಅರ್ಜೆಂಟೀನಾದ ಗೋಲ್ ಕೀಪರ್ ತಡೆಯುವಲ್ಲಿ ಯಶಸ್ವಿಯಾದರು. ಅಲ್ಲದೇ ಪೆನಾಲ್ಟಿ ಶೂಟೌಟ್ನಲ್ಲಿ ಫ್ರಾನ್ಸ್ ಪರ ಎಂಬಪ್ಪೆ ಅವರ ಗೋಲು ಹೊರತು ಪಡಿಸಿ ಯಾವುದೇ ಗೋಲ್ಗಳು ದಾಖಲಾಗಲಿಲ್ಲ. ಇನ್ನು, ಅರ್ಜೆಂಟೀನಾ ತಂಡ ಪೆನಾಲ್ಟಿ ಶೂಟೌಟ್ನಲ್ಲಿ 3 ಗೋಲ್ಗಳನ್ನು ದಾಖಲಿಸುವ ಮೂಲಕ ಫ್ರಾನ್ಸ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿ ವಿಶ್ವಕಪ್ ತನ್ನದಾಗಿಸಿಕೊಂಡಿತು.
ಅರ್ಜೆಂಟೀನಾದ ಗೆಲುವಿನ ಬಳಿಕ ಶಾರುಖ್ ಖಾನ್, ಮೌನಿ ರಾಯ್, ಸಂಜಯ್ ಕಪೂರ್, ಸೌತ್ ಸ್ಟಾರ್ ಮಮ್ಮುಟ್ಟಿ ಮತ್ತು ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಗಣ್ಯರು ತಂಡಕ್ಕೆ ಅಭಿನಂದಿಸಿದರು. 36 ವರ್ಷಗಳ ಬಳಿಕ ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆದ್ದಿದೆ.
ಇದನ್ನೂ ಓದಿ: ಚಾಂಪಿಯನ್ ಆಟ ಮುಂದುವರೆಸುತ್ತೇನೆ, ನಿವೃತ್ತಿ ಪಡೆಯುವುದಿಲ್ಲ : ಲಿಯೊನೆಲ್ ಮೆಸ್ಸಿ