ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ತಡರಾತ್ರಿ ಪಾರ್ಟಿಯ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಗುಂಡೇಟಿಗೆ ಬಲಿಯಾಗಿರುವ ಘಟನೆ ನಡೆದಿದೆ. ಇದು ಆಕಸ್ಮಿಕವಾಗಿ ನಡೆದ ಗುಂಡಿನ ದಾಳಿಯೋ ಅಥವಾ ಪಿತೂರಿಯ ಭಾಗವಾಗಿ ಗುಂಡಿನ ದಾಳಿ ನಡೆಸಲಾಗಿದೆಯೋ ಎಂದು ಕುರಿತು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಕೊಲೆಯಾದ ವಿದ್ಯಾರ್ಥಿನಿಯನ್ನು ನಿಷ್ಠಾ ತ್ರಿಪಾಠಿ (23) ಎಂದು ಗುರುತಿಸಲಾಗಿದೆ. ಹರ್ದೋಯ್ ಜಿಲ್ಲೆಯ ಮೂಲದ ನಿಷ್ಠಾ ಲಖನೌದ ಬಿಬಿಡಿ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಇಲ್ಲಿನ ಚಿನ್ಹಾಟ್ ಪ್ರದೇಶದಲ್ಲಿರುವ ದಯಾಳ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಮತ್ತು ಗುರುವಾರದ ತಡರಾತ್ರಿ ಪಾರ್ಟಿ ನಡೆಯುತ್ತಿತ್ತು. ಸ್ನೇಹಿತ ಆದಿತ್ಯ ಪಾಠಕ್ ಕರೆಯ ಮೇರೆಗೆ ನಿಷ್ಠಾ ಪಾರ್ಟಿಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಆದಿತ್ಯ ಪಾಠಕ್ ಹಾಗೂ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಇದು ಆಕಸ್ಮಿಕ ಸಾವಲ್ಲ, ಇದೊಂದು ಕೊಲೆ ಎಂದು ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಡುಗೆ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಸ್ತುಗಳನ್ನು ಗಮನಿಸಿದರೆ, ಡಿನ್ನರ್ ಅಂಡ್ ಡ್ರಿಂಕ್ಸ್ ಪಾರ್ಟಿ ನಡೆದಿದೆ ಎಂದು ವರದಿಯಾಗಿದೆ.
ನಡೆದಿದ್ದೇನು?: ಬಿಬಿಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಗಣೇಶ ಚತುರ್ಥಿ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿನಿ ನಿಷ್ಠಾ ದಯಾಳ್ ರೆಸಿಡೆನ್ಸಿಗೆ ಹೋಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಪಾರ್ಟಿಯ ಸಮಯದಲ್ಲೇ ನಿಷ್ಠಾಗೆ ಗುಂಡು ತಗುಲಿದೆ. ನಂತರ ಆಕೆಯನ್ನು ಸ್ನೇಹಿತರೇ ಲೋಹಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ. ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದು ಹರ್ದೋಯ್‌ನಿಂದ ದೌಡಾಯಿಸಿ ಸಂತ್ರಸ್ತೆಯ ತಂದೆ ಸಂತೋಷ್ ತಿವಾರಿ, ನಿಷ್ಠಾರನ್ನು ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಚಿನ್‌ಹತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಳಗಿನ ಜಾವ 3.30ರ ಸುಮಾರಿಗೆ ನಿಷ್ಠಾ ಎಂಬ ಯುವತಿ ದಾಖಲಾಗಿರುವ ಬಗ್ಗೆ ನಮಗೆ ಲೋಹಿಯಾ ಆಸ್ಪತ್ರೆಯಿಂದ ಮಾಹಿತಿ ಸಿಕ್ಕಿತ್ತು. ಗುಂಡಿನ ಗಾಯಗಳೊಂದಿಗೆ ಕರೆತರಲಾಗಿದೆ ಎಂದು ಆಸ್ಪತ್ರೆಯವರು ತಿಳಿಸಿದ್ದರು. ಈ ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಇತರರ ವಿಚಾರಣೆ ಕೂಡ ನಡೆಸಲಾಗುತ್ತಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿದ್ದ ಟ್ಯಾಕ್ಸಿಯಲ್ಲಿ 14 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ: ಇಬ್ಬರು ದುರುಳರು ಅರೆಸ್ಟ್