ಯಾವತ್ಮಲ್(ಮಹಾರಾಷ್ಟ್ರ): ಹೇಳದೇ ಕೇಳದೇ ಮಗಳು ಮನೆ ಬಿಟ್ಟು ಹೋದ ಕಾರಣದಿಂದ ಅವಮಾನವಾಗಿದೆ ಎಂದು ಕೋಪಗೊಂಡ ತಂದೆ ಮಗಳನ್ನು ಕೊಂದು ಯಾರಿಗೂ ತಿಳಿಯದಂತೆ ಅಂತ್ಯ ಸಂಸ್ಕಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಪ್ರಕರಣ ಸಂಬಂಧ ಚಂದನ್ಜಿರಾ ಪೊಲೀಸ್ ಠಾಣೆ ಅಧಿಕಾರಿಗಳು, ಬಾಲಕಿಯ ತಂದೆ ಸಂತೋಷ ಭೌರಾವ್ ಸರೋದೆ ಹಾಗೂ ಹಾಗೂ ಅವರ ಸೋದರ ಸಂಬಂಧಿ ನಾಮದೇವ್ ಭೌರಾವ್ ಸರೋದೆ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆಗೆ ಮುಂದಾಗಿದ್ದಾರೆ.
ಪ್ರಕರಣದ ಹಿನ್ನೆಲೆ: 17 ವರ್ಷದ ಬಾಲಕಿ ಸರೋದೆ ಕಳೆದ ಎರಡ್ಮೂರು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಡಿ. 13ರಂದು ಆಕೆ ಮನೆಗೆ ವಾಪಸ್ ಬಂದಿದ್ದಾಳೆ. ಈ ವೇಳೆ ಹೇಳದೇ ಕೇಳದೇ ಮನೆ ಬಿಟ್ಟು ಹೋದ ಕಾರಣ ತಂದೆ ಮತ್ತು ಮಗಳ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ಸಂಜೆ ಆಕೆ ಬೇವಿನ ಮರಕ್ಕೆ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದಾದ ಬಳಿಕ ಪೋಷಕರು ತರಾತರಿಯಲ್ಲಿ ಮಗಳ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಮಗಳ ಸಾವಿನ ಕುರಿತು ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಸಂಬಂಧ ಸ್ಥಳೀಯರು ಪ್ರಶ್ನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ. ಈ ವೇಳೆ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಇನ್ನು ಆಕೆಯ ಅಂತ್ಯ ಸಂಸ್ಕಾರ ಸ್ಥಳದಲ್ಲಿ ವಿಪರೀತ ಧಾರ್ಮಿಕ ವಿಧಿ ವಿಧಾನ ನಡೆಸಲಾಗಿದ್ದು, ಆಕೆಯ ಚಿತಾಭಸ್ಮವನ್ನು ಚೀಲದಲ್ಲಿ ತುಂಬಲಾಗಿದೆ. ಬಾಲಕಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳಾ ಅಥವಾ ತಂದೆಯೇ ಅವಮಾನವಾಗಿದೆ ಎಂದು ಆಕೆಯನ್ನು ಹತ್ಯೆ ಮಾಡಿದ್ದಾರಾ ಎಂಬುದರ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 302 ಅಡಿ ದೂರು ದಾಖಲಿಸಿದ್ದು. ಸಂತೋಷ ಭೌರಾವ್ ಸರೋದೆಯನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಮದುವೆಯಾದ 3 ತಿಂಗಳಿಗೆ ವ್ಯಕ್ತಿ ಆತ್ಯಹತ್ಯೆ; ಹೆಂಡತಿ ಕಿರುಕುಳ ಕಾರಣವೆಂದ ಪೋಷಕರು