ಉತ್ತರಕಾಶಿ(ಉತ್ತರಾಖಂಡ) : ಕಟ್ಟಿಕೊಂಡ ಹೆಂಡತಿ ಜೊತೆ ಜಗಳ ಮಾಡಿರುವ ಗಂಡನೋರ್ವ ಆಕ್ರೋಶದಲ್ಲಿ ನವಜಾತ ಹೆಣ್ಣು ಮಗುವನ್ನ ನೆಲದ ಮೇಲೆ ಎಸೆದು ಕೊಂದಿರುವ ಘಟನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೆಣ್ಣು ಮಗುವಿಗೆ ತಾಯಿ ಹಾಲುಣಿಸುತ್ತಿದ್ದ ಸಂದರ್ಭದಲ್ಲಿ ಆಕೆಯ ಜೊತೆ ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಪತಿ, ನವಜಾತ ಶಿಶುವನ್ನ ನೆಲದ ಮೇಲೆ ಎಸೆದಿದ್ದಾನೆ. ಪರಿಣಾಮ ಅದು ಸಾವನ್ನಪ್ಪಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಇದರ ಬೆನ್ನಲ್ಲೇ ಆರೋಪಿಯ ಬಂಧನ ಮಾಡಲಾಗಿದೆ.
ಇದನ್ನೂ ಓದಿ: ತೆಲಂಗಾಣ ಕಾಂಗ್ರೆಸ್ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ: ದೂರು
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಉತ್ತರಕಾಶಿಯ ಮೋರಿ ಬ್ಲಾಕ್ನ ಕುನಾರಾ ಗ್ರಾಮದ ಸುನೀತಾ ದೇವಿ ಹಾಗೂ ಆಕೆಯ ಪತಿ ಬಜರಂಗಿ ನಡುವೆ ಜಗಳವಾಗಿದೆ. ಈ ವೇಳೆ ನಾಲ್ಕು ತಿಂಗಳ ಮಗು ಅಳಲು ಶುರು ಮಾಡಿದೆ. ಅದಕ್ಕೆ ಹಾಲು ಕುಡಿಸಲು ತಾಯಿ ಮಡಿಲಲ್ಲಿ ಎತ್ತಿಕೊಂಡಿದ್ದಾಳೆ. ಇದೇ ಸಂದರ್ಭದಲ್ಲಿ ಕೋಪಗೊಂಡ ಬಜರಂಗಿ ಅದನ್ನ ಎತ್ತಿ ನೆಲದ ಮೇಲೆ ಎಸೆದಿದ್ದು, ಮಗು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.