ಸೋನಿಪತ್(ಹರಿಯಾಣ): ಹರಿಯಾಣದ ಸೋನಿಪತ್ನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಮನೆಯಲ್ಲಿ ಸಾಕಿದ್ದ ಕೋಳಿಗಳಿಗೆ ನೀರು, ಕಾಳು ಹಾಕಲಿಲ್ಲ ಎಂಬ ಕಾರಣಕ್ಕಾಗಿ ಮಗಳನ್ನೇ ಹೆತ್ತ ತಂದೆ ಹೊಡೆದು ಕೊಲೆ ಮಾಡಿದ್ದಾನೆ.
ವಿಚಾರಣೆ ವೇಳೆ ಆರೋಪಿ ತಂದೆ ಬಹಿರಂಗಪಡಿಸಿರುವ ವಿಷಯ ಕೇಳಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಸೋನಿಪತ್ನ ಬಜಾನಾ ಖುರ್ದ್ ಗ್ರಾಮದಲ್ಲಿ ಮೇ. 14ರಂದು ಈ ಘಟನೆ ನಡೆದಿದ್ದು, ಹೆತ್ತ ಮಗಳನ್ನ ಪಾಪಿ ತಂದೆ ಜಗ್ಗಣ್ಣ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಆರೋಪಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೋರ್ಟ್ಗೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಪಡೆದುಕೊಂಡಿದ್ದಾರೆ. ಮನೆಯಲ್ಲಿ ಸಾಕಿದ್ದ ಕೋಳಿಗಳಿಗೆ ಕಾಳು, ನೀರು ಹಾಕಿಲ್ಲ ಎಂಬ ಕಾರಣಕ್ಕಾಗಿ ಆಕ್ರೋಶಗೊಂಡಿರುವ ತಂದೆ, ಮಗಳನ್ನ ಹಗ್ಗದಿಂದ ಕಟ್ಟಿ ಹಾಕಿದ್ದು, ತದನಂತರ ಕಟ್ಟಿಗೆಯಿಂದ ಅಮಾನವೀಯ ರೀತಿಯಲ್ಲಿ ಥಳಿಸಿದ್ದಾನೆ. ಇದರಿಂದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಆತ ಈ ವಿಷಯ ಬಹಿರಂಗಪಡಿಸಿದ್ದಾನೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಮಂಜೀತ್ ಸಿಂಗ್, ಆರೋಪಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.