ಅನಂತಪುರ(ಆಂಧ್ರಪ್ರದೇಶ): ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿರುವ ಗಂಡನೊಬ್ಬ ಎರಡು ತಿಂಗಳ ಹೆಣ್ಣು ಮಗುವಿನ ಕೊಲೆ ಮಾಡಿದ್ದಾನೆ. ಈ ಅಮಾನವೀಯ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗಂ ಮಂಡಲದಲ್ಲಿ ನಡೆದಿದೆ.
ಪಾಪಿ ತಂದೆ ಎರಡು ತಿಂಗಳ ಮಗುವಿನ ಬಾಯಿಗೆ ಪ್ಲಾಸ್ಟರ್ ಹಾಕಿ, ಸೆಣಬಿನ ಚೀಲದಲ್ಲಿ ಕಟ್ಟಿ ಕೆರೆಯಲ್ಲಿ ಎಸೆದಿದ್ದಾನೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಲ್ಲಿಕಾರ್ಜುನ್ ಮತ್ತು ಆತನ ಪತ್ನಿ ಚಿಟ್ಟೆಮ್ಮ ಎರಡು ತಿಂಗಳ ಮಗುವಿನೊಂದಿಗೆ ಕಲ್ಯಾಣದುರ್ಗದ ಆರ್ಡಿಟಿ ಆಸ್ಪತ್ರೆಗೆ ತೆರಳಿದ್ದರು. ಮಗು ಅಳುತ್ತಿದ್ದ ಕಾರಣ ಮಲ್ಲಿಕಾರ್ಜುನ್ ತನ್ನ ಮಗಳನ್ನ ತೆಗೆದುಕೊಂಡು ಹೊರಗಡೆ ಹೋಗಿದ್ದಾನೆ. ಸಂಜೆ ಆದರೂ ವಾಪಸ್ ಮನೆಗೆ ಬಂದಿಲ್ಲ. ಹೀಗಾಗಿ ಅನುಮಾನಗೊಂಡಿರುವ ಆತನ ಪತ್ನಿ ಚಿಟ್ಟೆಮ್ಮ ಪೊಲೀಸರಿಗೆ ದೂರು ನೀಡಿದ್ದಾಳೆ.
ಇದನ್ನೂ ಓದಿರಿ: ಮಸಾಜ್ ಪಾರ್ಲರ್ನಲ್ಲಿ ಎಂಟು ಸ್ಪೈ ಕ್ಯಾಮೆರಾ.. ಸಂತ್ರಸ್ತೆಯಿಂದ ಆರೋಪ
ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಸಂಬಂಧಿಗಳ ಸಹಾಯದಿಂದ ರಾತ್ರಿಯಿಡೀ ಹುಡುಕಾಟ ನಡೆಸಿದ್ದಾರೆ. ಆದರೆ, ಅವರ ಬಗ್ಗೆ ಸುಳಿವು ಸಿಕ್ಕಿಲ್ಲ. ಇದಾದ ಬಳಿಕ ಮಲ್ಲಿಕಾರ್ಜುನ್ ಹಾಗೂ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ವೇಳೆ ಆತ ಅನಂತಪುರದಲ್ಲಿ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ನಡೆಸಿದಾಗ ಮಗುವಿನ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ತದನಂತರ ಆರೋಪಿ ಕಲ್ಯಾಣದುರ್ಗಕ್ಕೆ ಆಗಮಿಸಿ, ಮಗುವಿನ ಶವ ಎಸೆದಿರುವ ಸ್ಥಳ ತೋರಿಸಿದ್ದಾನೆ. ಹಸುಳೆಯ ಶವ ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಕುಟುಂಬಕ್ಕೆ ಹಸ್ತಾಂತರ ಮಾಡಿದ್ದು, ಆತನನ್ನು ಬಂಧನ ಮಾಡಿದ್ದಾರೆ.