ಜಮ್ಮು ಮತ್ತು ಕಾಶ್ಮೀರ: "ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರಳಿ ನೀಡಬೇಕು ಮತ್ತು ಸಾರ್ವತ್ರಿಕ ಚುನಾವಣೆಗಳನ್ನು ನಡೆಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಇಲ್ಲಿ ಶನಿವಾರ ಮತ್ತೊಮ್ಮೆ ಒತ್ತಾಯಿಸಿದ್ದಾರೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಅದರ ರಾಜ್ಯ ಸ್ಥಾನಮಾನ ಮರುಸ್ಥಾಪಿಸಬೇಕು" ಎಂದು ಬೇಡಿಕೆ ಮಂಡಿಸಿದರು.
ಜಮ್ಮುವಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಏಕೆ ಚುನಾವಣೆಗಳನ್ನು ನಡೆಸುತ್ತಿಲ್ಲ?. ಇದು ತುಂಬಾ ವಿಚಿತ್ರವಾಗಿದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಇಲ್ಲಿನ ಜನರು ಇದೇ ರಾಷ್ಟ್ರಕ್ಕೆ ಸೇರಿದವರು. ಹೀಗಾಗಿ ಈ ಹಿಂದಿನ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಬೇಕು. ನಿಗದಿತ ಅವಧಿಗೆ ಚುನಾವಣೆಗಳು ನಡೆಯಬೇಕು" ಎಂದು ಒತ್ತಾಯಿಸಿದರು.
ಕೇಂದ್ರಾಡಳಿತ ಪ್ರದೇಶ ಮಾಡಿದ್ದು ದುರಂತ: "ಕಣಿವೆ ರಾಜ್ಯವನ್ನು ಇಬ್ಭಾಗಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದನ್ನು "ದುರಂತ" ಎಂದು ಬಣ್ಣಿಸಿರುವ ಫಾರೂಕ್ ಅಬ್ದುಲ್ಲಾ, ಸುಂದರ ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾರ್ಪಡಿಸಿದ ಕೇಂದ್ರ ಸರ್ಕಾರ ನಿರ್ಧಾರ ದುರಂತವಾಗಿದೆ. ರಾಷ್ಟ್ರದ ಇತಿಹಾಸದಲ್ಲಿ ಇದೇ ಮೊದಲು" ಎಂದು ಟೀಕಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಏಕೆ ಚುನಾವಣೆಗಳು ನಡೆಯುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ತುಸು ಗರಂ ಆದ ಮಾಜಿ ಸಿಎಂ, "ನೀವು ಈ ಪ್ರಶ್ನೆಯನ್ನು ಕೇಂದ್ರ ಸರ್ಕಾರಕ್ಕೆ ಕೇಳಬೇಕು. ಇಲ್ಲಿ ಚುನಾವಣೆ ನಡೆಯಬೇಕು ಎಂಬುದು ನನ್ನ ಆಶಯವೂ ಆಗಿದೆ. ಆದರೆ, ಸರ್ಕಾರ ಇದ್ಯಾವುದನ್ನೂ ಮಾಡುತ್ತಿಲ್ಲ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರ. ಸಂವಿಧಾನದ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಆದರೆ ಇಲ್ಲಿ ಅವುಗಳ ಜಾರಿ ಸಾಧ್ಯವಾಗುತ್ತಿಲ್ಲ" ಎಂದು ಆರೋಪಿಸಿದರು.
ಕೇಂದ್ರಕ್ಕೆ ರಾಜ್ಯ ನಾಯಕರ ನಿಯೋಗ: "ಚುನಾವಣೆ ನಡೆಸಲು ಮತ್ತು ರಾಜ್ಯ ಸ್ಥಾನಮಾನವನ್ನು ಮರಳಿ ನೀಡಬೇಕು ಎಂದು ಒತ್ತಾಯಿಸಲು ಕೇಂದ್ರ ಸರ್ಕಾರಕ್ಕೆ ನಿಯೋಗವನ್ನು ಒಯ್ಯಲಾಗುವುದು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಯಕರನ್ನು ಭೇಟಿ ಮಾಡಲಾಗುವುದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ನಮ್ಮ ಹಕ್ಕೊತ್ತಾಯ ಮಂಡಿಸಲಾಗುವುದು" ಎಂದು ಫಾರೂಕ್ ತಿಳಿಸಿದರು.
"ಈ ಹಿಂದೆ ಭರವಸೆ ನೀಡಿದಂತೆ ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ 50,000 ಉದ್ಯೋಗಗಳನ್ನು ನೀಡಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಫಾರೂಕ್ ಅಬ್ದುಲ್ಲಾ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನೀವು ಇದುವರೆಗೂ ಇಲ್ಲಿನ ಯುವಕರಿಗೆ ಎಷ್ಟು ಉದ್ಯೋಗಗಳನ್ನು ನೀಡಿದ್ದೀರಿ. ಬುಲ್ಡೋಜರ್ ರಾಜಕೀಯ, ಭ್ರಷ್ಟಾಚಾರದಿಂದಾಗಿ ಜನರ ಮೇಲೆ ಆಸ್ತಿ ತೆರಿಗೆ ವಿಧಿಸಲಾಗುತ್ತಿದೆ. ಇದೆಲ್ಲಾ ಏನು" ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
"ಕಾಶ್ಮೀರದ ಯುವಕರು ಉದ್ಯೋಗಾವಕಾಶಗಳಿಗಾಗಿ ನಾನಾ ಕಡೆ ಹೋಗುವಂತಾಗಿದೆ. ಅವರಿಗೆ ಇಲ್ಲಿಯೇ ಉದ್ಯೋಗ ಮಾಡುವ ಹಕ್ಕಿಲ್ಲವೇ?. ಕಾಶ್ಮೀರದ ಯುವಕರು ಭಾರತದಾದ್ಯಂತ ವಿವಿಧ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ ಎಂದು ಆರೋಪಿಸಿದ ಫಾರೂಕ್, ಅವರುಗಳು ಎಲ್ಲಿದ್ದಾರೆಂದು ಈವರೆಗೂ ಪೋಷಕರಿಗೆ ಮಾಹಿತಿ ಇಲ್ಲ. ಈ ವಿಷಯಗಳ ಕುರಿತೂ ಸರ್ಕಾರದ ಜೊತೆ ಚರ್ಚಿಸಲಾಗುವುದು. ಸಂಸತ್ತಿನ ಒಳಗೂ ಇದನ್ನು ಪ್ರಸ್ತಾಪಿಸುತ್ತೇವೆ. ನಮ್ಮ ಜನರ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲು ಬಯಸುತ್ತೇವೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ನನ್ನ ತಂದೆ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ