ಬಕ್ಸಾರ್ (ಬಿಹಾರ): ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಭೂ ಸ್ವಾಧೀನ ವಿಚಾರವಾಗಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಘಟನೆ ಬುಧವಾರ ನಡೆದಿದೆ. ಇಲ್ಲಿನ ಬನಾರ್‌ಪುರ ಗ್ರಾಮದ ರೈತರ ಮನೆಗೆ ನುಗ್ಗಿ ಮೇಲೆ ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಿ ರೈತರು ಇಂದು ಹೋರಾಟ ನಡೆಸಿದ್ದು, ಈ ವೇಳೆ ಪ್ರತಿಭಟನಾನಿರತ ರೈತರು ಪೊಲೀಸ್ ವ್ಯಾನ್‌ಗೆ ಬೆಂಕಿ ಹಚ್ಚಿ, ಹಲವಾರು ಸರ್ಕಾರಿ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.
ಇಲ್ಲಿನ ಚೌಸಾ ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಉತ್ತಮ ದರ ನೀಡುವಂತೆ ಒತ್ತಾಯಿಸಿ ಬನಾರ್‌ಪುರ ಗ್ರಾಮದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕೆ ಮಂಗಳವಾರ ರಾತ್ರಿ ರೈತರ ಮನೆಗೆ ಪೊಲೀಸರು ನುಗ್ಗಿ ಥಳಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಇದೇ ವಿಚಾರವಾಗಿ ಪೊಲೀಸರ ವಿರುದ್ಧ ರೈತರು ಹೋರಾಟ ನಡೆಸಿದ್ದು, ಇದು ವಿಕೋಪಕ್ಕೆ ತಿರುಗಿದೆ. ಈ ವೇಳೆ, ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಸುಮಾರು 6 ಸುತ್ತು ಗುಂಡು ಹಾರಿಸಿದ್ದಾರೆ.
ಮಹಿಳೆಯರು, ಮಕ್ಕಳ ಮೇಲೂ ಲಾಠಿ ಪ್ರಹಾರ: ತಮ್ಮ ಜಮೀನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ರೈತರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಮನೆಗೆ ನುಗ್ಗಿ ಮಹಿಳೆಯರು ಮತ್ತು ಮಕ್ಕಳ ಮೇಲೂ ಲಾಠಿ ಪ್ರಹಾರ ನಡೆಸಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರತಿಭಟನಾನಿತರ ರೈತರು ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೋಪಗೊಂಡ ರೈತರು ಪೊಲೀಸ್ ವ್ಯಾನ್ ಹಾಗೂ ಜೊತೆಗೆ ಚೌಸಾ ಥರ್ಮಲ್ ಪವರ್ ಪ್ಲಾಂಟ್ ಅನ್ನು ನಿರ್ವಹಿಸುತ್ತಿರುವ ಸಟ್ಲಜ್ ಜಲ ವಿದ್ಯುತ್ ನಿಗಮ (ಎಸ್‌ಜೆವಿಎನ್) ಗೇಟ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ: ಈ ಕುರಿತು ಪ್ರತಿಕ್ರಿಯಿಸಿದ ಬಕ್ಸಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕುಮಾರ್, ಈ ಘಟನೆಯಲ್ಲಿ ಪೊಲೀಸ್ ವ್ಯಾನ್ ಮತ್ತಿತರ ವಾಹನಗಳು ಹಾನಿಗೀಡಾಗಿವೆ. ಪ್ರತಿಭಟನಾಕಾರರು ವಿದ್ಯುತ್ ಸ್ಥಾವರವನ್ನೂ ಧ್ವಂಸಗೊಳಿಸಿದ್ದಾರೆ ಎಂದು ಹೇಳಿದ್ದಾರೆ. ಇತ್ತ, ವಾಹನಕ್ಕೆ ಬೆಂಕಿ ಹಚ್ಚಿದ ಆರೋಪದ ಮೇಲೆ ಆರು ಜನರನ್ನು ಬಂಧಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮದಲ್ಲಿ ಹಾಗೂ ಶಾಖೋತ್ಪನ್ನ ವಿದ್ಯುತ್ ಘಟಕದಲ್ಲಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಘಟನೆ ಬಗ್ಗೆ ಗೊತ್ತಿಲ್ಲ ಎಂದ ಡಿಸಿಎಂ: ಇತ್ತ, ಬಕ್ಸಾರ್ ಜಿಲ್ಲೆಯ ರೈತರ ಮೇಲೆ ಪೊಲೀಸರ ದೌರ್ಜನ್ಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಈ ಘಟನೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಘಟನೆ ಕುರಿತು ಮಾಧ್ಯಮಗಳ ವರದಿ ಮೂಲಕ ನನ್ನ ಗಮನಕ್ಕೆ ಬಂದಿದೆ. ಆದರೆ, ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.
ಏನಿದು ಭೂ ಸ್ವಾಧೀನ ವಿವಾದ?: ಚೌಸಾ ವಿದ್ಯುತ್ ಸ್ಥಾವರಕ್ಕಾಗಿ 2010-11ರಲ್ಲೇ ರೈತರ ಜಮೀನುಗಳನ್ನು ಎಸ್‌ಜೆವಿಎನ್ ಗುರುತಿಸಿತ್ತು. ಅಲ್ಲದೇ, ರೈತರಿಗೆ 2010-11ರ ಭೂ ದರದ ಪ್ರಕಾರ ಪರಿಹಾರವನ್ನು ಪಾವತಿಸಲಾಗಿದೆ. ಆದರೆ, ಕಂಪನಿಯು 2022ರಲ್ಲಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಹೀಗಾಗಿ ಭೂಮಿಗೆ ನಿಗದಿಪಡಿಸಿದ ದರದಲ್ಲಿ ರೈತರಿಗೆ ಭಾರಿ ನಷ್ಟವಾಗಿದೆ. ಈಗಿನ ದರ ಆಧರಿಸಿ ಪರಿಹಾರ ನೀಡುವಂತೆ ಒತ್ತಾಯಿಸಿ ಕಳೆದ ಎರಡು ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಾಲಗಾರರ ಒತ್ತಡ ತಾಳದೇ ಅಂಡರ್ 16 ತಂಡದ ಕ್ರಿಕೆಟಿಗ ಸಾವಿಗೆ ಶರಣು