ಗಾಜಿಪುರ (ಉತ್ತರ ಪ್ರದೇಶ): ಇಂದು ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ನಡೆಸಬೇಕೆಂದಿದ್ದ ಕಿಸಾನ್ ಮಹಾ ಪಂಚಾಯತ್ ರದ್ದಾಗಿದೆ.
ಮಹಾ ಪಂಚಾಯತ್ಗೆ ಯವತ್ಮಾಲ್ ಜಿಲ್ಲಾಡಳಿತ ಅನುಮತಿ ನೀಡಲು ನಿರಾಕರಿಸಿದೆ. ಜಿಲ್ಲೆಯಲ್ಲಿನ ಕೊರೊನಾ ಪರಿಸ್ಥಿತಿಯಿಂದಾಗಿ ರ‍್ಯಾಲಿ ನಡೆಸಲು ಅನುಮತಿಗಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಜಿಲ್ಲಾಡಳಿತ ತಿರಸ್ಕರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಪಿಎಂ ಮೋದಿ ನೇತೃತ್ವದಲ್ಲಿಂದು ನೀತಿ ಆಯೋಗದ 6ನೇ ಆಡಳಿತ ಮಂಡಳಿ ಸಭೆ
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗೆ ರೈತರನ್ನು ಮತ್ತಷ್ಟು ಒಗ್ಗೂಡಿಸಲು ಯವತ್ಮಾಲ್ ಜಿಲ್ಲೆಯ ಆಜಾದ್ ಮೈದಾನದಲ್ಲಿ ಇಂದು ಕಿಸಾನ್ ಮಹಾ ಪಂಚಾಯತ್ ನಡೆಸುವುದಾಗಿ ಟಿಕಾಯತ್ ತಿಳಿಸಿದ್ದರು. ಇದೀಗ ಪ್ರತಿಕ್ರಿಯೆ ನೀಡಿರುವ ಅವರು, ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಹೀಗಾಗಿ ಕಿಸಾನ್ ಮಹಾ ಪಂಚಾಯತ್ ರದ್ದಾಗಿದೆ. ರೈತರು ಯವತ್ಮಾಲ್ಗೆ ಬರಬೇಡಿ ಎಂದು ಹೇಳಿದ್ದಾರೆ.